ಜಿಲ್ಲೆ

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ

ರಮೇಶ ಜಹಗೀರದಾರ್

ದಾವಣಗೆರೆ :  ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬ ನಾಗರಿಕರು ತಮ್ಮ ಸುತ್ತಲಿನ ಪರಿಸರದಲ್ಲಿ ಒಂದೊಂದು ಗಿಡ ನೆಟ್ಟು, ಅವುಗಳನ್ನು ದತ್ತು ಪಡೆದು ಮಕ್ಕಳಂತೆ ಪೋಷಣೆ ಮಾಡಬೇಕು ಎಂದು ನಿವೃತ್ತ ಪ್ರಾಚಾರ್ಯ ಕೆ.ಎಸ್. ಈಶ್ವರಪ್ಪ ಹೇಳಿದರು.  ನಗರದ ತರಳಬಾಳು ಬಡಾವಣೆ ಮೂರನೇ ಹಂತದ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಭಾನುವಾರ, ಬಡಾವಣೆಯ ಉದ್ಯಾನವನದಲ್ಲಿ ಪರಿಸರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ, ಉಚಿತ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಒಂದು ಅಧ್ಯಯನದ ಪ್ರಕಾರ 2050ನೇ ಇಸವಿಯ ವೇಳೆಗೆ ಸಮುದ್ರದ 50ರಷ್ಟು ಭಾಗವನ್ನು ಪ್ಲಾೃಸ್ಟಿಕ್ ಆವರಿಸಿಕೊಳ್ಳುವ ಸಾಧ್ಯತೆಯಿದೆ. ಇದರಿಂದ ಸಮುದ್ರದಲ್ಲಿರುವ ಜಲಚರಗಳ ಜೀವನ ಚಕ್ರದ ಮೇಲೆ ದುಷ್ಪರಿಣಾಮ ಬೀರಬಹುದು.  ಅಲ್ಲದೇ ಜಲಚರಗಳನ್ನು ಆಹಾರವಾಗಿ ಅವಲಂಬಿಸಿರುವ ಮಾನವನಿಗೂ ಆಹಾರದ ಕೊರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುತ್ತದೆ. ಭವಿಷ್ಯದಲ್ಲಿ ಭೂಮಿಯ ತಾಪಮಾನವು 50 ಡಿಗ್ರಿ ತಲುಪಬಹುದು. ಆಗ ಅನೇಕ ಪ್ರಾಣಿ, ಪಕ್ಷಿಗಳ ಸಂಕುಲವು ಭೂಮಿಯಿಂದ ನಾಶವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.  ಪರಿಸರವಾದಿ ಡಾ. ಶಾಂತಾ ಭಟ್ ಮಾತನಾಡಿ, ಪರಿಸರ ಸಂರಕ್ಷಣೆ ಎರಡು ನೆಲೆಗಟ್ಟಿನಲ್ಲಿ ಆಗುತ್ತದೆ. ವೈಯಕ್ತಿಕ ಹಂತದಲ್ಲಿ ಮತ್ತು ನೀತಿ ನಿರೂಪಣೆಯ ನೆಲೆಗಟ್ಟಿನಲ್ಲಿ ಈ ಪ್ರಯತ್ನ ನಡೆಯುತ್ತದೆ ಎಂದು ತಿಳಿಸಿದರು.  ನಮ್ಮ ಮನೆಯಿಂದಲೇ ಇದು ಪ್ರಾರಂಭವಾಗಬೇಕು. ಮನೆಯಲ್ಲಿಯೇ ಉತ್ಪತ್ತಿಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಮಕ್ಕಳಿಗೆ, ಮನೆಯವರಿಗೆ ತಿಳಿವಳಿಕೆ ನೀಡಬೇಕು. ಹಿರಿಯರು ಪಾಲಿಸುತ್ತಿದ್ದ ಆಹಾರ ವಿಹಾರ ಪದ್ಧತಿಗಳನ್ನು ಮತ್ತೆ ಅನುಸರಿಸುವುದು ಹಾಗೂ ಅವುಗಳ ಮಹತ್ವವನ್ನು ಯುವ ಪೀಳಿಗೆಯವರಿಗೆ ಮನವರಿಕೆ ಮಾಡಬೇಕು ಎಂದು ಸಲಹೆ ನೀಡಿದರು.  ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಬಡಾವಣೆಯ ಎಂಟು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. 200ಕ್ಕೂ ಹೆಚ್ಚು ಬಡಾವಣೆಯ ನಾಗರಿಕರಿಗೆ ಉಚಿತ ಸಸಿಗಳನ್ನು ವಿತರಿಸಿ, ಅವುಗಳನ್ನು ನೆಟ್ಟು ಪೋಷಿಸಲು ಪ್ರತಿಜ್ಞೆ ಮಾಡಲಾಯಿತು.  ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಸಿ.ಆರ್. ಮಲ್ಲಿಕಾರ್ಜುನಯ್ಯ, ಉಪಾಧ್ಯಕ್ಷ ಕಲ್ಲಪ್ಪ, ಖಜಾಂಚಿ ಡಾ. ಸತೀಶ್, ಸದಸ್ಯರಾದ ಮನೋಜ್, ಶಂಕರ್ ಮೂರ್ತಿ, ಸುಮಿತ್ರಮ್ಮ, ನಾಗಪ್ಪ, ನಾಗೇಂದ್ರಪ್ಪ ಇದ್ದರು.  ಸಹನಾ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಚ್.ಕೆ. ರೇವಣಸಿದ್ದನಗೌಡ ನಿರೂಪಿಸಿದರು. ಆನಂದ ವಂದಿಸಿದರು.