ಜಿಲ್ಲೆ

ಸರ್ಕಾರಿ ಕಚೇರಿಗಳಲ್ಲಿ ಮಳೆ ನೀರು ಕೊಯ್ಲು

ರಮೇಶ ಜಹಗೀರದಾರ್

ದಾವಣಗೆರೆ :  ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಬೇಕು ಎಂದು ನೆಲ, ಜಲ ಹಾಗೂ ಪರಿಸರ ಸಂರಕ್ಷಣಾ ಆಂದೋಲನ ಸಮಿತಿ ಒಕ್ಕೂಟದ ರಾಜ್ಯ ಸಂಚಾಲಕ ಬಲ್ಲೂರು ರವಿಕುಮಾರ್ ಆಗ್ರಹಿಸಿದರು.  ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಳೆ ನೀರು ಕೊಯ್ಲು, ಕೆರೆಗಳ ಸಂರಕ್ಷಣೆ ಮತ್ತು ಗಿಡ ನೆಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ಜಿಲ್ಲೆಯ ಮಂತ್ರಿ, ಸಂಸದರು ಹಾಗೂ ಶಾಸಕರು ಮಳೆ ನೀರು ಕೊಯ್ಲು ಮಾಡುವ ಮೂಲಕ ಸಾರ್ವಜನಿಕರಿಗೂ ಪ್ರೇರಣೆ ನೀಡಬೇಕು ಎಂದು ಒತ್ತಾಯಿಸಿದರು.  ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಅಂದಾಜು 47 ಟಿಎಂಸಿ ನೀರು ತುಂಬಿಸಬಹುದು. ಆದರೆ, ಅವುಗಳಲ್ಲಿ ಹೂಳು ತುಂಬಿದೆ. ಮಳೆಗಾಲದಲ್ಲಿ ಹೆಚ್ಚಿನ ನೀರು ಸಂಗ್ರಹಿಸಿ, ಬೇಸಿಗೆಗೆ ಇಟ್ಟುಕೊಳ್ಳಬೇಕಾದರೆ ಕೆರೆಗಳ ಹೂಳು ಎತ್ತಿ, ಅವುಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆರೆಗಳ ಅಭಿವೃದ್ಧಿಗೆ ಹಾಗೂ ಹೊಸ ಕೆರೆಗಳ ನಿರ್ಮಾಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.  ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನ ಕೊಟ್ಟೂರೇಶ್ವರ ಮಾತನಾಡಿ, ನಮ್ಮ ಟ್ರಸ್ಟ್ ಹಾಗೂ ವಿವಿಧ ಸಂಘ, ಸಂಸ್ಥೆಗಳು, ಬಡಾವಣೆಗಳ ನಾಗರಿಕರ ಸಹಕಾರದೊಂದಿಗೆ ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಪ್ರತಿ ವರ್ಷ 2 ಸಾವಿರ ಗಿಡಗಳನ್ನು ನೆಡಲಾಗುತ್ತಿತ್ತು. ಈ ಬಾರಿ 130ಕ್ಕೂ ಹೆಚ್ಚು ಶಾಲೆ, ಬಡಾವಣೆ, ಉದ್ಯಾನವನ ಇನ್ನಿತರ ಸ್ಥಳಗಳಲ್ಲಿ 5 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ್, ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಉದಯ ಕುಮಾರ್, ಹೆಬ್ಬಾಳು ರಾಜಯೋಗಿ, ಅಂಜಿನಪ್ಪ ಪೂಜಾರ್, ಎನ್.ಜಿ. ನಾಗಪ್ಪ ಇದ್ದರು.