ಜಿಲ್ಲೆ

ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

ರಮೇಶ ಜಹಗೀರದಾರ್

ದಾವಣಗೆರೆ : ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ಹೇಳಿದರು.
 ದಾವಣಗೆರೆ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗ, ಎಂಸಿಎ ಮತ್ತು ಎನ್‌ಎಸ್‌ಎಸ್ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
 ಮನುಷ್ಯನ ಜೀವನ ಪರಿಸರದ ಜತೆಗೆ ಬೆಸೆದುಕೊಂಡಿದೆ. ಪರಿಸರ ರಕ್ಷಿಸದಿದ್ದರೆ ಭವಿಷ್ಯವೇ ಇಲ್ಲ. ಶುದ್ಧ ಗಾಳಿ, ನೀರು ಪಡೆಯಲು ಪರಿಸರ ಅತ್ಯಗತ್ಯ. ವರ್ಷಕ್ಕೊಂದು ಗಿಡ ನೆಟ್ಟು ಬೆಳೆಸಿದರೆ ಬಹುದೊಡ್ಡ ಕೊಡುಗೆಯಾಗಲಿದೆ ಎಂದು ತಿಳಿಸಿದರು.
 ಭೂಮಿಯ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿದೆ. ಜಾಗತೀಕರಣದ ನಂತರ ಕೈಗಾರಿಕೀಕರಣ, ನಗರೀಕರಣ ಹೆಚ್ಚಾಗಿ ಮನುಷ್ಯನ ದುರಾಸೆಗೆ ಪರಿಸರ ನಾಶವಾಗುತ್ತಿದೆ. ಅದರ ಪರಿಣಾಮವನ್ನು ಮನುಕುಲ ಎದುರಿಸುತ್ತಿದೆ. ಅತಿವೃಷ್ಟಿ, ಅನಾವೃಷ್ಟಿ, ಸುನಾಮಿಯಂತಹ ಪ್ರಕೃತಿ ವಿಕೋಪಗಳನ್ನು ತಡೆಯಲು ಗಿಡ ನೆಟ್ಟು ಪರಿಸರ ಉಳಿಸುವುದೊಂದೇ ಪರಿಹಾರ ಎಂದರು.
 ಕುಲಸಚಿವ ಪ್ರೊ.ಯು.ಬಿ. ಮಹಾಬಲೇಶ್ವರ ಮಾತನಾಡಿ, ಪರಿಸರವು ಮನುಕುಲದ ರಕ್ಷಕ. ಅದನ್ನು ಕಾಪಾಡಲು ವಿದ್ಯಾರ್ಥಿಗಳು ಗಮನ ನೀಡಿದರೆ, ಉದ್ದೇಶಿತ ಗುರಿ ಈಡೇರಲು ಸಾಧ್ಯ ಎಂದು ನುಡಿದರು.
 ಕಂಪ್ಯೂಟರ್ ವಿಭಾಗದ ಅಧ್ಯಕ್ಷ ಪ್ರೊ.ಚಂದ್ರಕಾಂತ ನಾಯ್ಕಡಿ, ತೋಟಗಾರಿಕೆ ಇಲಾಖೆಯ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿ, ಗಿಡ ನೆಟ್ಟರು. ಎನ್‌ಎಸ್‌ಎಸ್ ಅಧಿಕಾರಿ ಡಾ.ಅಶೋಕ ಕುಮಾರ ಪಾಳೇದ ಸ್ವಾಗತಿಸಿದರು. ಎಂಸಿಎ ವಿಭಾಗದ ಅಧ್ಯಕ್ಷ ಪ್ರೊ.ಎಂ.ಬಸವಣ್ಣ ವಂದಿಸಿದರು.