ದಾವಣಗೆರೆ : ಇಂದಿನ ಆಧುನಿಕ ಯುಗದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಾಂತ್ರಿಕ ವಿಷಯಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಬೆಂಗಳೂರು ಸಾಫ್ಟ್ ಲ್ಯಾಬ್ಸ್‌ನ ಮಲ್ಲೇಶ್ ತಿಳಿಸಿದರು.
ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಕಲ್ಪನಾ ಚಾವ್ಲಾ ಸೆಮಿನಾರ್ ಹಾಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕ ಪರಿಣಿತಿ ಹೊಂದಿದಾಗ ಮಾತ್ರ ಒಳ್ಳೆಯ ಹುದ್ದೆ ಪಡೆಯಲು ಸಾಧ್ಯ. ಎಐ ಫಾರ್ ಲೈಫ್ ಕಾರ್ಯಾಗಾರದಲ್ಲಿ ಕೃತಕ ಬುದ್ಧಿವಂತಿಕೆ ವಿಷಯದ ಕುರಿತು ಹೆಚ್ಚು ಮಾಹಿತಿ ನೀಡಲಿದ್ದು ಇದರ ಉಪಯೋಗಗಳು ಬಹುಮುಖಿಯಾಗಿವೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕೇವಲ ಹೆಚ್ಚು ಅಂಕ ಪಡೆದು ಉತ್ತೀರ್ಣರಾದರೆ ಸಾಲದು. ಅದರ ಜತೆಗೆ ಇಂದಿನ ಅಗತ್ಯ ವಿಷಯಗಳ ಅಧ್ಯಯನವು ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ವಿಭಾಗದ ಮುಖ್ಯಸ್ಥ ಡಾ.ಬಿ.ಎಸ್. ಸುನೀಲ್ ಕುಮಾರ್ ಮಾತನಾಡಿ, ಎಐ ಫಾರ್ ಲೈಫ್‌ನ ವಿಶೇಷತೆಗಳು ಮತ್ತು ಅದರ ಪ್ರಾಮುಖ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ನಿರ್ವಹಣಾ ಪ್ರತಿನಿಧಿ ವೈ.ಯು. ಸುಭಾಶ್‌ಚಂದ್ರ, ಕಾರ್ಯಕ್ರಮ ಸಂಯೋಜಕರಾದ ಎಸ್. ನೀಲಾಂಬಿಕೆ ಎಸ್ ಹಾಗೂ ಪ್ರೊ. ಫೈರೋಜ್ ಖಾನ್ ಇದ್ದರು.