ದಾವಣಗೆರೆ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ. 65 ರಷ್ಟು ಮತದಾನವಾಗಿದೆ. ನಗರದ ಎ.ವಿ.ಕೆ ಕಾಲೇಜಿನಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 1887 ಮತದಾರರಿದ್ದು 1229 ಮಂದಿ ಮತ ಚಲಾಯಿಸಿದರು. ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಚನ್ನಗಿರಿ ಕೇದಾರ ಮಠದ ಶ್ರೀಗಳು ಮತದಾನ ಮಾಡಿದ ಪ್ರಮುಖರು. ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಎ.ಎಸ್. ವೀರಣ್ಣ, ಅಣಬೇರು ರಾಜಣ್ಣ, ಮುಖಂಡ ಎಸ್.ಕೆ. ವೀರಣ್ಣ ಮತದಾನ ಮಾಡಿದರು. ಪ್ರೊ. ವೈ. ವೃಷಭೇಂದ್ರಪ್ಪ ಚುನಾವಣಾಧಿಕಾರಿಯಾಗಿದ್ದರು. ಮಹಾಸಭಾ ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ್, ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು. ಬಿಐಇಟಿ ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯಿತು.