ಜಿಲ್ಲೆ

ಕೋವಿಡ್ ಕೇರ್ ಸೆಂಟರ್‌ಗಳ ಸ್ಥಗಿತಕ್ಕೆ ಸೂಚನೆ

Davanagere

ದಾವಣಗೆರೆ: ಕೋವಿಡ್ ಸೋಂಕಿಗೆ ಒಳಗಾದ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಜಿಲ್ಲೆಯಾದ್ಯಂತ ತೆರೆಯಲಾಗಿದ್ದ ಕೋವಿಡ್ ಕೇರ್ ಸೆಂಟರ್‌ಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕೋವಿಡ್ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತಾನಾಡಿ, ಜಿಲ್ಲೆಯಲ್ಲಿ ಸದ್ಯ 616 ಸಕ್ರಿಯ ಪ್ರಕರಣಗಳಿದ್ದು, ಅವುಗಳಲ್ಲಿ 131 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 417 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದು, ಯಾವುದೇ ಕರೊನಾ ಪೀಡಿತರು ಈ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಇಲ್ಲದ ಕಾರಣ ಅವುಗಳನ್ನು ಸ್ಥಗಿತಗೊಳಿಸಬೇಕು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿವಿಧ ಇಲಾಖಾ ಸಿಬ್ಬಂದಿಗಳನ್ನು ವಾಪಾಸ್ ಮಾತೃ ಇಲಾಖೆಗೆ ಕಳುಹಿಸಿಕೊಡುವಂತೆ ತಿಳಿಸಿದರು.

ಮುಂದಿನ ಚಳಿಗಾಲದ ದಿನಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುವ ಸುಳಿವಿದ್ದು ತಕ್ಷಣಕ್ಕೆ ಕೈಗೊಳ್ಳಬೇಕಾದ ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಮತ್ತೆ ಅಗತ್ಯ ಬಿದ್ದರೆ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಎಚ್‌ಒ ನಾಗರಾಜ್, ಡಿಎಸ್‌ಒ ಡಾ.ರಾಘವನ್, ನಗರಾಭಿವೃದ್ಧಿ ಕೋಶದ ಅಧಿಕಾರಿ ನಜ್ಮಾ ಇದ್ದರು.

ಇ-ಸಂಜೀವಿನಿಗೆ ಒತ್ತು: ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಇ-ಸಂಜೀವಿನಿ ಆ್ಯಪ್ ಬಳಸುವ ಮೂಲಕ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದರು.

ಆಸ್ಪತ್ರೆಗೆ ತೆರಳಬೇಕಾದ ಪ್ರಕರಣ ಹೊರತುಪಡಿಸಿ ಸಣ್ಣ ಪುಟ್ಟ ಕಾಯಿಲೆಯವರು ವಿಡಿಯೋ ಕಾಲ್ ಮುಖಾಂತರ ಇ-ಪ್ರಿಸ್ಕ್ರಿಪ್ಷನ್ ಪಡೆಯಬಹುದು. ಇದನ್ನೇ ಹೆಚ್ಚು ಪ್ರಚುರಪಡಿಸಬೇಕು ಎಂದು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದರು.

ಡಿಎಲ್‌ಒ ಡಾ.ಮುರಳೀಧರ್ ಮಾತನಾಡಿ, ಈಗಾಗಲೇ ಇ-ಸಂಜೀವಿನಿಯಡಿ 282 ಜನ ಪ್ರಯೋಜನ ಪಡೆದಿದ್ದಾರೆ. 150 ಜನರ ಕನ್ಸಲ್ಟೇಷನ್ ಆಗಿದೆ. ಆ್ಯಂಡ್ರಾಯ್ಡಾ ಮೊಬೈಲ್ ಫೋನ್ ಇಲ್ಲದವರು ಸಮೀಪದ ಎ.ಎನ್.ಎಂ ಅವರನ್ನು ಸಂಪರ್ಕಿಸಿದರೆ ನೆರವು ನೀಡುತ್ತಾರೆ ಎಂದು ಮಾಹಿತಿ ನೀಡಿದರು.