ಜಿಲ್ಲೆ

ದಸಂಸ ಬಣಗಳು ಒಗ್ಗೂಡಿದರೆ ಜನರಿಗೆ ನ್ಯಾಯ

ರಮೇಶ ಜಹಗೀರದಾರ್

ದಾವಣಗೆರೆ : ದಲಿತ ಸಂಘರ್ಷ ಸಮಿತಿಯ ಬಣಗಳು ಒಗ್ಗೂಡಿದರೆ ಮಾತ್ರ ಜನರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
 ಸಮಿತಿಯ 50ನೇ ಸಂಸ್ಥಾಪನಾ ದಿನದ ಅಂಗವಾಗಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ, ಸಂಭ್ರಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
 ದಲಿತರ, ಬಡವರ ಪರ ಹೋರಾಟ ಮಾಡಿದ ದಲಿತ ಸಂಘರ್ಷ ಸಮಿತಿಯನ್ನು ಕಟ್ಟಿ ಬೆಳೆಸಿದ ಮಹಾನ್ ನಾಯಕ ಪ್ರೊ.ಬಿ. ಕೃಷ್ಣಪ್ಪ. ಅವರ ನಿಧನದ ಬಳಿಕ ಸಂಘಟನೆಗಳು ಹರಿದು ಹಂಚಿ ಹೋಗಿರುವುದು ನೋವಿನ ಸಂಗತಿ ಎಂದು ತಿಳಿಸಿದರು.
 ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆಯಡಿ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡುವ ಕಾನೂನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಂದಿನ ಸಚಿವ ಎಚ್. ಆಂಜನೇಯ ಜಾರಿಗೆ ತಂದರು. ಕೇಂದ್ರ ಸರ್ಕಾರವೂ ಇದನ್ನು ಜಾರಿಗೆ ತಂದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.
 ಲಕ್ಷಾಂತರ ಟನ್ ಅಕ್ಕಿ ಗೋದಾಮಿನಲ್ಲಿ ಕೊಳೆಯುತ್ತಿದ್ದರೂ ಒಂದು ಕೆ.ಜಿ. ಅಕ್ಕಿಗೆ 34 ರೂ. ಕೊಡುತ್ತೇವೆ ಎಂದು ಮನವಿ ಮಾಡಿದರೂ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡಲಿಲ್ಲ. ಈಗ ಅದೇ ಅಕ್ಕಿಯನ್ನು ಭಾರತ್ ಅಕ್ಕಿ ಹೆಸರಿನಲ್ಲಿ ಒಂದು ಕೆಜಿಗೆ  29 ರೂ.ಗೆ ಮಾರಾಟ ಮಾಡಲು ಹೊರಟಿದೆ. ಆದರೆ ಜನರು ಖರೀದಿಸುತ್ತಿಲ್ಲ. ಎಲ್ಲಿ ಸಿಗುತ್ತದೆ ಎಂಬ ಮಾಹಿತಿಯೂ ಇಲ್ಲ ಎಂದು ಹೇಳಿದರು.
 ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿದರು. ಡಾ.ಎಚ್. ವಿಶ್ವನಾಥ್ ಉಪನ್ಯಾಸ ನೀಡಿದರು. ಸಮಿತಿಯ ಜಿಲ್ಲಾ ಸಂಚಾಲಕ ಕುಂದವಾಡ ಮಂಜುನಾಥ್, ಮುಖಂಡರಾದ ಹನುಮಂತಪ್ಪ ಅಣಜಿ, ಪಿ.ಜೆ. ಮಹಾಂತೇಶ್, ಚಿತ್ರಲಿಂಗಪ್ಪ ಗಾಂಧಿನಗರ, ಪರಮೇಶ್ ಬೆನಕನಹಳ್ಳಿ, ಕುಬೇಂದ್ರಪ್ಪ ಸೂರಗೊಂಡನಹಳ್ಳಿ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಕೆ. ವಿಜಯಲಕ್ಷ್ಮೀ, ಎಚ್. ಮಲ್ಲೇಶ್, ಸಿದ್ದರಾಮಣ್ಣ ಬುಳುಸಾಗರ, ಸಾರಥಿ ನಾಗರಾಜಪ್ಪ, ಎಂ. ಏಳುಕೋಟೆ ಇದ್ದರು.
 ...
 
 (((ಬಾಕ್ಸ್)))
 ಸಮಿತಿಯ ಹೆಸರು ಬಳಸಿದರೆ ದೂರು ದಾಖಲು
 ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.ನಂ.47/7475) ಹೆಸರು, ನೋಂದಣಿ ಸಂಖ್ಯೆ ಬಳಸಿದರೆ ಅಂತಹವರ ವಿರುದ್ಧ ದೂರು ದಾಖಲಿಸಿ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಹೇಳಿದರು.
 ಸಂಘದ ಹೆಸರಿನಲ್ಲಿ ಕೆಲವರು ದಾವಣಗೆರೆಯಲ್ಲಿ ಭಾನುವಾರ ಕಾರ್ಯಕ್ರಮವನ್ನು ಆಯೋಜಿಸುವ ಫ್ಲೆಕ್ಸೃ್ ಅಳವಡಿಸಿದ್ದಾರೆ. ಬೆಂಗಳೂರಿನಲ್ಲಿ ದಸಂಸ ಹೆಸರು ಹೇಳುವ ಒಬ್ಬರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಆ ಪಕ್ಷಕ್ಕೆ ಹೋದ ಮೇಲೆ ಡಿಎಸ್‌ಎಸ್‌ನಲ್ಲಿ ಅವರಿಗೆ ಏನು ಕೆಲಸ? ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿರುವ ದಸಂಸಕ್ಕೆ 50 ವರ್ಷಗಳ ದಾಖಲೆ ನಮ್ಮ ಬಳಿ ಇವೆ. ಅವರ ವಾರಸುದಾರರು ನಾವು. ಮಿಕ್ಕವರು ನಕಲಿ. ಇದರ ಹೆಸರು ಹೇಳಲು ನೈತಿಕತೆ ಇಲ್ಲ. ದಸಂಸ ಹೆಸರು ಹೇಳಿ ರಥ ಎಳೆಯಬೇಕಾದವರು ನಾವು. ನಾವು ಖಾತೆದಾರರೇ ಹೊರತು ಒತ್ತುವರಿದಾರರಲ್ಲ ಎಂದರು.
 ವಿಚಾರಗಳನ್ನು ಎದುರಿಸಬೇಕಾದರೆ ಹೊರಗಡೆ ಬನ್ನಿ. ಪದೇ ಪದೇ ಸಂಘಟನೆಯು ನಮ್ಮದೇ ಎಂದು ಹೈಜಾಕ್ ಮಾಡಿದರೆ ಪಕ್ಷದಿಂದ ವಜಾ ಮಾಡುವಂತೆ ಸಂಬಂಧಪಟ್ಟ ಅಧ್ಯಕ್ಷರಿಗೆ ದೂರು ನೀಡುತ್ತೇವೆ ಎಂದರು.