ದಾವಣಗೆರೆ : ಕಳ್ಳಸಾಗಣೆ ಮೂಲಕ ಮಾದಕ ವಸ್ತುಗಳ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಈ ಜಾಲವನ್ನು ಬೇರು ಸಮೇತ ಕಿತ್ತೆಸೆಯಬೇಕಾಗಿದೆ. ಮಾದಕ ವಸ್ತುಗಳ ಮಾರಾಟವನ್ನು ಯುವ ಸಮುದಾಯವನ್ನು ಗುರಿಯಾಗಿಸಿ ಮಾಡಲಾಗುತ್ತದೆ. ಕಾಲೇಜು ಹಂತದಲ್ಲಿಯೇ ಮಾಹಿತಿ ಸಂಗ್ರಹಿಸಲಾಗುವುದು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಜಿಲ್ಲಾಡಳಿತದ ಸಹಕಾರದೊಂದಿಗೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರ ಜತೆಗೆ ಸಭೆ ನಡೆಸಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲಾಗುವುದು ಎಂದರು. ಯುವ ಸಂಪನ್ಮೂಲ ದೇಶದ ಆಸ್ತಿ. ಈ ರಾಷ್ಟ್ರೀಯ ಸಂಪತ್ತನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಮದ್ಯ ಹಾಗೂ ಮಾದಕ ವಸ್ತುಗಳಿಂದ ದೂರವಿರುವಂತೆ ವ್ಯಾಪಕ ಜಾಗೃತಿಯ ಜತೆಗೆ ಮಾದಕ ವಸ್ತುಗಳ ನಿಯಂತ್ರಣಕ್ಕೆ ಜಿಲ್ಲಾಡಳಿತಗಳ ಸಮನ್ವಯದೊಂದಿಗೆ ಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ವ್ಯಸನಮುಕ್ತ, ಸ್ವಸ್ಥ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ. ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾಜ ತಿದ್ದುವ ಕೆಲಸ ಮಾಡದೇ ಇದ್ದಿದ್ದರೆ ಇಂದು ನಾವು ಹೇಗೆ ಇರುತ್ತಿದ್ದೆವು ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಮದ್ಯ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪಪರಿಣಾಮಗಳ ಬಗ್ಗೆ ಪಠ್ಯಪುಸ್ತಕದಲ್ಲಿ ಅಳವಡಿಸಿದರೆ ಸಾಲದು, ಅವುಗಳ ಬಗ್ಗೆ ಹೆಚ್ಚು ವಿಚಾರ ವಿನಿಮಯ, ಜಾಗೃತಿ ಕಾರ್ಯಕ್ರಮ ಏರ್ಪಡಿಸಿ ಯುವ ಸಮುದಾಯಕ್ಕೆ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ವ್ಯಸನಮುಕ್ತ ಸಮಾಜ ಕಟ್ಟುವಲ್ಲಿ ಎಲ್ಲರ ಸಹಕಾರದಿಂದ ಮದ್ಯಪಾನ ಸಂಯಮ ಮಂಡಳಿಯಿಂದ ಪರಿಣಾಮಕಾರಿ ಕೆಲಸ ಮಾಡಲು ಗುರಿ ಹೊಂದಲಾಗಿದೆ ಎಂದರು.