ಜಿಲ್ಲೆ

ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕ್ರಮಕ್ಕೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ  : ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರಿಗೆ ಮನವಿ ಸಲ್ಲಿಸಲಾಯಿತು.  ಒಕ್ಕೂಟದ ರಾಜ್ಯ ಸಂಚಾಲಕ ಡಿ.ಆರ್. ಅರವಿಂದಾಕ್ಷ ಮಾತನಾಡಿ, ದಾವಣಗೆರೆ ನಗರ ಸೇರಿದಂತೆ ರಾಜ್ಯಾದ್ಯಂತ ಅನಧಿಕೃತ ಬೈಕ್ ಟ್ಯಾಕ್ಸಿಯನ್ನು ಸ್ಥಗಿತಗೊಳಿಸುವಂತೆ ಕರ್ನಾಟಕ ಉಚ್ಚ ನ್ಯಾಯಾಲಯ ಮಾಡಿರುವ ಮಹತ್ವದ ಆದೇಶವನ್ನು ಕರ್ನಾಟಕ ಚಾಲಕರ ಒಕ್ಕೂಟ ಹರ್ಷದಿಂದ ಸ್ವಾಗತಿಸುತ್ತದೆ. ಇದು ಶ್ರಮಜೀವಿ ಚಾಲಕರಿಗೆ ಹಾಗೂ ಕರ್ನಾಟಕ ಚಾಲಕರ ಒಕ್ಕೂಟಕ್ಕೆ ಸಿಕ್ಕ ಜಯ. ಈಗಲಾದರೂ ದಾವಣಗೆರೆಯ ಸಾರಿಗೆ ಅಧಿಕಾರಿಗಳು ರಸ್ತೆಗಿಳಿದು ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.  ಈ ವಿಚಾರವಾಗಿ 2 ತಿಂಗಳಿಂದಲೂ ನಿರಂತರ ಆಗ್ರಹಿಸುತ್ತಾ ಬಂದಿದ್ದು, ಅನಧಿಕೃತ ಬೈಕ್ ಟ್ಯಾಕ್ಸಿ ವಿರುದ್ಧದ ವಿಚಾರದಲ್ಲಿ ಸಾರಿಗೆ ಅಧಿಕಾರಿಗಳು ಕೈಗೊಂಡಿರುವ ಕಾನೂನು ಕ್ರಮದ ಬಗ್ಗೆ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿ ಹಲವು ದಿನಗಳಾಗಿದ್ದು, ಶೀಘ್ರವೇ ದಾವಣಗೆರೆಯ ಸಾರಿಗೆ ಅಧಿಕಾರಿಗಳು ನಮಗೆ ಮಾಹಿತಿ ನೀಡಿ ಕರ್ನಾಟಕ ಚಾಲಕರ ಒಕ್ಕೂಟದ ನ್ಯಾಯಬದ್ಧ ಹೋರಾಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿದರು.  ನಗರದಲ್ಲಿ ಆಟೋ ಚಾಲಕರಿಗೆ ಡ್ರೈವರ್ ಡಿಸ್‌ಪ್ಲೇ ಮತ್ತು ಆಟೋಗಳಿಗೆ ನೂತನವಾಗಿ ಡಿವಿಜಿ ಸಂಖ್ಯೆ ನೀಡುವಂತೆ ಮನವಿ ಮಾಡಿದರು.  ನಗರದಲ್ಲಿ ಗಾರೆ ಕೆಲಸ ಮಾಡುವವರು, ಎತ್ತಿನಗಾಡಿ ಓಡಿಸುವವರು, ಹಮಾಲಿ ಕೆಲಸ ಮಾಡುವವರು. ತರಕಾರಿ, ಹೂವು, ಸೊಪ್ಪು ಮಾರುವವರು ಇನ್ನೂ ವಿವಿಧ ಕೆಲಸ ಮಾಡುವವರು ನಗರದಲ್ಲಿ ಪಾರ್ಟ್ ಟೈಂ ಆಗಿ ಆಟೋ ಚಾಲನೆ ಮಾಡುತ್ತಿದ್ದಾರೆ. ಇಂತಹವರಿಗೆ ಲೈಸೆನ್ಸ್ ಆಗಲೀ, ಸಂಚಾರಿ ನಿಯಮದ ಅರಿವಾಗಲಿ ಇರುವುದಿಲ್ಲ ಎಂದರು.  ಪ್ರಯಾಣಿಕರ ಆಟೋಗಳಲ್ಲಿ ನಿಯಮ ಮೀರಿ ಲಗೇಜು ಸಾಗಣೆ ಮಾಡುತ್ತಿದ್ದು ಇದರಿಂದ ಇತರೆ ವಾಹನ ಸವಾರರಿಗೂ ರಸ್ತೆಯಲ್ಲಿ ತೊಂದರೆಗಳಾಗುತ್ತಿವೆ. ಈ ಕೂಡಲೇ ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಆದೇಶ ಮಾಡಿ, ಆಟೋ ಚಾಲಕರಿಗೆ ಡೈವರ್ ಡಿಸ್‌ಪ್ಲೇ ಹಾಗೂ ನಗರದ ಪರ್ಮಿಟ್ ಹೊಂದಿರುವ ಆಟೋಗಳಿಗೆ ಮಾತ್ರ ಡಿವಿಜಿ ಸಂಖ್ಯೆ ನೀಡುವ ಮೂಲಕ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.  ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಬಿ. ಅಂಜುಕುಮಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ. ಬಸವರಾಜ್, ಸದಸ್ಯರಾದ ವಿ. ಲೋಕೇಶ್, ಎಂ. ರಾಘವೇಂದ್ರ, ಗುಡ್ಡಪ್ಪ ಬಿಸಲೇರಿ ನಾಗರಾಜ್, ಎನ್. ಗುರುರಾಜ್ ಇದ್ದರು.