ಜಿಲ್ಲೆ

ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲಿ

ರಮೇಶ ಜಹಗೀರದಾರ್

ಮಕ್ಕಳು ವೈಜ್ಞಾನಿಕ ಮನೋಭಾವ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಬಾಪೂಜಿ ವಿದ್ಯಾಸಂಸ್ಥೆ, ಬೆಂಗಳೂರಿನ ಪಿ.ಇ.ಎಸ್. ವಿಶ್ವವಿದ್ಯಾಲಯದ ಪ್ರದರ್ಶನ ಕಲೆಗಳ ವಿಭಾಗದ ಸಹಯೋಗ, ದಾವಣಗೆರೆಯ ಅನ್ವೇಷಕರು ಆರ್ಟ್ ಫೌಂಡೇಷನ್’ ಸಹಕಾರದೊಂದಿಗೆ ನಗರದ ಬಿ.ಐ.ಇ.ಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, ‘ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್’ ನಾಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.  ಆಲ್ಬರ್ಟ್ ಐನ್‌ಸ್ಟೈನ್ ಅವರು ವಿಜ್ಞಾನ ಮತ್ತು ಗಣಿತದಲ್ಲಿ ಮಾಡಿದ ಸಾಧನೆಗಾಗಿ ನೋಬೆಲ್ ಪುರಸ್ಕಾರಕ್ಕೆ ಪಾತ್ರರಾದರು. ವಿಶ್ವ ಶಾಂತಿಯ ಸಂದೇಶ ಸಾರಿದರು. ಅವರು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.  ವಿದ್ಯಾರ್ಥಿಗಳು ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಮುಂದೆ ಬರಬೇಕು. ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಸರಳವಾಗಿ ಬದುಕುವುದನ್ನು ಕಲಿಯಬೇಕು ಎಂದರು.  ‘ಯುಗಪುರುಷ ಆಲ್ಬರ್ಟ್ ಐನ್‌ಸ್ಟೈನ್’ ನಾಟಕದಲ್ಲಿ ಐನ್‌ಸ್ಟೈನ್ ಅವರ ಬಾಲ್ಯದಿಂದ ಹಿಡಿದು ಸಾಧನೆಯ ಪಯಣವನ್ನು ಕಟ್ಟಿಕೊಟ್ಟಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆಯಬೇಕು ಎಂದು ಹೇಳಿದರು.  ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ.ಎಚ್.ಬಿ. ಅರವಿಂದ್, ಪ್ರತಿಮಾ ಸಭಾದ ಗೌರವಾಧ್ಯಕ್ಷ ಪ್ರೊ.ಎಸ್. ಹಾಲಪ್ಪ, ಬೆಂಗಳೂರಿನ ಪಿ.ಇ.ಎಸ್. ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಎಸ್.ವಿ. ಸುಷ್ಮಾ, ಅನ್ವೇಷಕರು ಆರ್ಟ್ ಫೌಂಡೇಷನ್‌ನ ಸಿದ್ದರಾಜು ಇದ್ದರು. ಪುಣ್ಯಶ್ರೀ ಪ್ರಾರ್ಥಿಸಿದರು. 65 ನಿಮಿಷಗಳ ಅವಧಿಯ ನಾಟಕ ಎಲ್ಲರ ಮನಸೂರೆಗೊಂಡಿತು.