ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ರಂಗ ಕಲಾವಿದ, ಚಿತ್ರನಟ ಆರ್.ಟಿ. ಅರುಣ್ ಕುಮಾರ್, ನಿವೃತ್ತ ಪ್ರಾಚಾರ್ಯ ದಾದಾಪೀರ್ ನವಿಲೇಹಾಳ್, ರಂಗಕರ್ಮಿಗಳಾದ ಎನ್.ಎಸ್. ಸಿದ್ದರಾಜು, ರವೀಂದ್ರ ಅರಳಗುಪ್ಪಿ ಇದ್ದರು.
ಮತ್ತೊಬ್ಬ ರಂಗಕರ್ಮಿ ಬಸವರಾಜ ಐರಣಿ ಮಾತನಾಡಿ, ವೃತ್ತಿರಂಗಭೂಮಿ ರಂಗಾಯಣ ಸ್ಥಾಪನೆಯಾದಾಗಿನಿಂದ ನಿರೀಕ್ಷಿಸಿದಷ್ಟು ಚಟುವಟಿಕೆಗಳು ನಡೆದಿರಲಿಲ್ಲ. ಮುಂಬರುವ ದಿನಗಳಲ್ಲಿ ಅವುಗಳಿಗೆ ವೇಗ ದೊರೆಯಲಿ ಎಂದು ಹಾರೈಸಿದರು.
ರಂಗ ಸಂಘಟಕ ಎನ್.ಎಸ್. ರಾಜು ಮಾತನಾಡಿ, ಇಡೀ ನಾಡಿನ ವ್ಯಾಪ್ತಿಯನ್ನು ಹೊಂದಿರುವ ವೃತ್ತಿ ರಂಗಭೂಮಿ ರಂಗಾಯಣಕ್ಕೆ ದೊಡ್ಡ ಕಚೇರಿಯ ಅಗತ್ಯವಿದೆ. ಕಲಾವಿದರು, ಸಾರ್ವಜನಿಕರು ಬಂದು ಹೋಗಲು ಅನುಕೂಲವಾಗುವಂತಿರಬೇಕು ಎಂದು ಸಲಹೆ ನೀಡಿದರು.
ರಂಗಕರ್ಮಿ ಬಾ.ಮ. ಬಸವರಾಜಯ್ಯ ಮಾತನಾಡಿ, ಮಲ್ಲಿಕಾರ್ಜುನ ಕಡಕೋಳ ಅವರಿಗೆ ವೃತ್ತಿರಂಗಭೂಮಿಯ ಒಳಹೊರಗುಗಳ ಪರಿಚಯವಿದೆ.ಅವರ ಅವಧಿಯಲ್ಲಿ ರಂಗಭೂಮಿಯ ಹಳೆಯ ವೈಭವ ಮರುಕಳಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಮಾತನಾಡಿ, ದಾವಣಗೆರೆ ಶಿಕ್ಷಣ, ಆರೋಗ್ಯ, ಉದ್ಯಮ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದೆ. ಆದರೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಿಂದೆ ಬಿದ್ದಿದೆ. ಗತ ವೈಭವ ಮರುಕಳಿಸಲಿ ಎಂದು ಆಶಿಸಿದರು.
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ವೃತ್ತಿರಂಗಭೂಮಿ ರಂಗಾಯಣ ಸ್ಥಾಪನೆ ಮಾಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಈಗ ನನಗೆ ಆ ಸಂಸ್ಥೆಯ ನಿರ್ದೇಶಕನ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದು ಆಶಯ ವ್ಯಕ್ತಪಡಿಸಿದರು.
ವೃತ್ತಿರಂಗಭೂಮಿಯು ಜನಸಾಮಾನ್ಯರ ಪರಂಪರೆಗೆ ಸೇರಿದ್ದಾಗಿದೆ. ಪ್ರೇಕ್ಷಕ ಪರಂಪರೆಯನ್ನು ಇದು ಬೆಳೆಸಿದೆ. ನಗರ ಮಟ್ಟದಲ್ಲಿ ಹೊಸ ಅಲೆಯ ನಾಟಕ ಪ್ರಯೋಗಗಳಾಗುತ್ತಿವೆ ಎಂದು ತಿಳಿಸಿದರು.
ಇಂದಿಗೂ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಒಂದು ವರ್ಷಕ್ಕೆ ಸರಾಸರಿ 15 ಸಾವಿರ ನಾಟಕಗಳು ಪ್ರದರ್ಶನ ಕಾಣುತ್ತವೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 3 ರಿಂದ 4 ರಂಗ ಪ್ರಯೋಗಗಳಾಗುತ್ತವೆ. ಪ್ರತಿ ನಾಟಕಕ್ಕೆ ತಾವೇ ಐದಾರು ಲಕ್ಷ ರೂ. ಖರ್ಚು ಮಾಡಿ, ಸ್ವತಃ ನಾಟಕ ರಚಿಸಿ, ನಿರ್ದೇಶನ ಮಾಡುತ್ತಾರೆ. ಈ ಅಂಕಿ ಅಂಶವನ್ನು ಗಮನಿಸಿದರೆ ವರ್ಷಕ್ಕೆ 100 ಕೋಟಿ ರೂ.ಗಳನ್ನು ನಾಟಕಗಳಿಗಾಗಿ ಗ್ರಾಮೀಣ ಜನರು ವೆಚ್ಚ ಮಾಡುತ್ತಾರೆ. ಇದೆಲ್ಲವನ್ನೂ ಅವರ ಆತ್ಮ ಸಂತೋಷಕ್ಕಾಗಿ ಮಾಡುತ್ತಾರೆ ಎಂದು ವಿವರಿಸಿದರು.
ಆಗಿನ ಕಾಲದಲ್ಲಿ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿ ಬಂತೆಂದರೆ ಜತೆಗೆ ವ್ಯಾಗನ್‌ಗಳಲ್ಲಿ ಮೊಲ, ಜಿಂಕೆ, ನವಿಲುಗಳ ಸಹಿತ ರಂಗ ಪರಿಕರಗಳು ಬರುತ್ತಿದ್ದವು. ಆ ವೈಭವ, ಸಂಭ್ರಮಮರುಕಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡೋಣ. ಅಭಿನಯ, ಸಂಗೀತ, ರಂಗಸಜ್ಜಿಕೆ ಸೇರಿ ನಾಟಕದ ಎಲ್ಲ ವಿಭಾಗಗಳನ್ನು ಸಮಕಾಲೀನ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡಿಸೋಣ ಎಂದು ಹೇಳಿದರು.
ದಾವಣಗೆರೆ ವೃತ್ತಿರಂಗಭೂಮಿಯ ತವರು. ಒಂದು ಕಾಲಕ್ಕೆ ಇಲ್ಲಿ 4 ಕಂಪನಿಗಳು ಏಕ ಕಾಲದಲ್ಲಿ ಬಿಡಾರ ಹೂಡುತ್ತಿದ್ದವು. ಆ ಕಾಲದ 136 ಕಂಪನಿಗಳ ಪೈಕಿ 128 ತಂಡಗಳು ಇಲ್ಲಿ ನಾಟಕ ಪ್ರದರ್ಶಿಸಿದ ಇತಿಹಾಸವಿದೆ. ಗುಬ್ಬಿ ವೀರಣ್ಣ, ವರದಾಚಾರ್, ಸುಬ್ಬಯ್ಯ ನಾಯ್ಡು ಅವರಂಥ ದಿಗ್ಗಜರು ಇಲ್ಲಿ ವೃತ್ತಿ ರಂಗಭೂಮಿಯ ತೇರನ್ನು ಎಳೆದಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ವೃತ್ತಿರಂಗಭೂಮಿ ರಂಗಾಯಣದ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದರು.
ವರ್ತಮಾನದ ಅಗತ್ಯಕ್ಕೆ ಅನುಗುಣವಾಗಿ ವೃತ್ತಿರಂಗಭೂಮಿ ರಂಗಾಯಣವನ್ನು ಕಟ್ಟೋಣ ಎಂದು ರಂಗಾಯಣದ ನೂತನ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಹೇಳಿದರು.