ದಾವಣಗೆರೆ : ನಗರದ ಹಳೇ ಕುಂದುವಾಡದ ಬೆಂಚಿಕಟ್ಟೆಯಲ್ಲಿ ಸೋಮವಾರ ಸಂಜೆ ಶಂಕಿತ ಹುಚ್ಚು ನಾಯಿ ದಾಳಿಯಿಂದ ಮಕ್ಕಳು ಸೇರಿ 15 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡ 6 ಜನರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಸಂಜೆ ಶಾಲೆ ಬಿಡುವ ಸಮಯದಲ್ಲಿ ಈ ಘಟನೆ ನಡೆದಿದೆ. ಏಕಾಏಕಿ ದಾಳಿ ನಡೆಸಿದ ನಾಯಿಯು ನಾಲ್ಕೈದು ಮಕ್ಕಳ ತಲೆ, ಕೈ ಕಾಲುಗಳಿಗೆ ಕಚ್ಚಿದೆ. ತಪ್ಪಿಸಲು ಹೋದವರ ಮೇಲೂ ದಾಳಿ ಮಾಡಿ ಘಾಸಿಗೊಳಿಸಿದೆ ಎಂದು ತಿಳಿದು ಬಂದಿದೆ. ಆ ನಾಯಿಗೆ ಹುಚ್ಚು ಹಿಡಿದಿರಬಹುದು ಎಂದು ಶಂಕಿಸಲಾಗಿದೆ. ಬೆಳಗ್ಗೆಯಿಂದಲೂ ನಾಯಿಯು ಗ್ರಾಮದ ಅಲ್ಲಲ್ಲಿ ಹಲವರಿಗೆ ಸಣ್ಣ ಪ್ರಮಾಣದಲ್ಲಿ ಕಚ್ಚಿದೆ. ಎದುರಿಗೆ ಬಂದವರ ಮೇಲೆ ಎರಗಿದೆ. ಅಷ್ಟೇ ಅಲ್ಲದೇ ಕೆಲವು ಕೋಳಿ, ನಾಯಿಗಳಿಗೂ ಕಚ್ಚಿದೆ. ಇದರಿಂದ ಆತಂಕಗೊಂಡ ಗ್ರಾಮಸ್ಥರು ಆ ನಾಯಿಗಾಗಿ ಹುಡುಕಾಟ ನಡೆಸಿದರೂ ಸಿಕ್ಕಿರಲಿಲ್ಲ. ಸಂಜೆ ನಡೆದ ಘಟನೆ ಗಂಭೀರವಾಗಿತ್ತು. ಶಾಲೆ ಬಿಡುವ ಹೊತಿನಲ್ಲಿ ಚಿಕ್ಕ ಮಕ್ಕಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಬಿಡಿಸಲು ಹೋದ ವ್ಯಕ್ತಿಗೂ ಕಚ್ಚಿದೆ. ಮಹಿಳೆಯೊಬ್ಬರೂ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಇಡೀ ದಿನ ನಾಯಿ ಕಚ್ಚಿದ ವಿಷಯವೇ ಗ್ರಾಮದಲ್ಲಿ ಚರ್ಚೆಗೆ ಗ್ರಾಸವಾಯಿತು. ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು ಮಹಾನಗರ ಪಾಲಿಕೆಯವರು ನಿರ್ಲಕ್ಷೃ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಇಷ್ಟೆಲ್ಲ ರಾದ್ಧಾಂತ ಮಾಡಿದ ಆ ನಾಯಿಯನ್ನು ಹೊಡೆದು ಕೊಲ್ಲಲಾಯಿತು ಎಂದು ಮೂಲಗಳು ತಿಳಿಸಿವೆ. ...