ಜಿಲ್ಲೆ

ವಿಶ್ವದಲ್ಲಿ 1 ಬಿಲಿಯನ್ ಜನರಿಗೆ ಬಿಪಿ

ರಮೇಶ ಜಹಗೀರದಾರ್

ದಾವಣಗೆರೆ :  ವಿಶ್ವದಲ್ಲಿ 1 ಬಿಲಿಯನ್ ಹಾಗೂ ದೇಶದಲ್ಲಿ ಶೇ.10 ರಿಂದ 30 ರಷ್ಟು ಜನರಿಗೆ ರಕ್ತದೊತ್ತಡ ಕಾಯಿಲೆಯಿದೆ ಎಂದು ಜೆಜೆಎಂ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಎಂ. ವಿಶ್ವನಾಥ್ ಹೇಳಿದರು.  ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಧಿಕ ರಕ್ತದೊತ್ತಡ, ಕಾರಣ, ಚಿಕಿತ್ಸೆ ಹಾಗೂ ಪರಿಹಾರ’ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.  ಪ್ರಪಂಚದಲ್ಲಿ ಮುಂದಿನ 5ರಿಂದ 10 ವರ್ಷಗಳಲ್ಲಿ 1.5 ಬಿಲಿಯನ್ ಜನರಿಗೆ ಬಿಪಿ ಕಾಯಿಲೆ ಬರಬಹುದು ಎಂಬ ಅಂದಾಜಿದೆ ಎಂದು ತಿಳಿಸಿದರು.  ಬಿಪಿ ಕಾಯಿಲೆಯ ಪ್ರಾರಂಭದ ಹಂತದಲ್ಲಿ ಯಾವ ಲಕ್ಷಣಗಳು ಇರುವುದಿಲ್ಲ, ಯಾವುದೋ ಕಾರಣಕ್ಕೆ ವೈದರಲ್ಲಿ ಹೋದಾಗ ಬಿಪಿ ಇದೆ ಎಂದು ಹೇಳಬಹುದು. ಅದಕ್ಕಾಗಿ ಈ ಕಾಯಿಲೆಗೆ ಸೈಲೆಂಟ್ ಕಿಲ್ಲರ್ ಎಂಬ ಹೆಸರಿದೆ ಎಂದರು.  ರಕ್ತದ ಒತ್ತಡ ಏರುತ್ತಾ ಹೋದಾಗ ತಲೆಸುತ್ತು, ತಲೆನೋವು, ಆಯಾಸ, ಕಣ್ಣು ಮಂಜಾಗುವುದು, ಎದೆಬಡಿತ, ಎದೆನೋವು  ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ಬಿಪಿ ಕಾಯಿಲೆ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ದುಷ್ಪರಿಣಾಮಗಳು ಕಾಣಿಸಿಕೊಳುತ್ತವೆ ಎಂದು ಹೇಳಿದರು.  ಮೂತ್ರಪಿಂಡ, ಹೃದಯದ ಕಾಯಿಲೆ, ಪಾರ್ಶ್ವವಾಯು, ಕಣ್ಣಿನ ತೊಂದರೆಗಳು, ಮೆದುಳಲ್ಲಿ ರಕ್ತಸ್ರಾವದಿಂದ ಹಠಾತ್ ಸಾವು ಬಿ.ಪಿ. ಕಾಯಿಲೆಯ ಪ್ರಮುಖ ದುಷ್ಪರಿಣಾಮಗಳಾಗಿವೆ. ಪ್ರಾರಂಭದ ಹಂತದಲ್ಲೆ ಹತೋಟಿಯಲ್ಲಿ ಇಟ್ಟುಕೊಂಡರೆ ಈ ಅಂಗಗಳ ಶಾಶ್ವತ ಹಾನಿ ತಪ್ಪಿಸಬಹುದು ಎಂದು ತಿಳಿಸಿದರು.  ರಕ್ತದೊತ್ತಡ ಕಾಯಿಲೆ ಚಿಕಿತ್ಸೆಯ ಮೊದಲ ಹಂತ ಜೀವನ ಶೈಲಿಯಲ್ಲಿ ಬದಲಾವಣೆ ತರುವುದು. ದೈಹಿಕ ವ್ಯಾಯಮಗಳಾದ ನಡಿಗೆ, ಯೋಗ, ಆಟಗಳಲ್ಲಿ ಭಾಗವಹಿಸುವುದು. ಈಜು, ಮುಂತದ ಚಟುವಟಿಕೆಗಳಲ್ಲಿ ತೊಡಗುವುದು. ಆಹಾರದಲ್ಲಿ ಉಪ್ಪಿನ ಅಂಶ ಕಡಿಮೆ ಮಾಡಿಕೊಳ್ಳಬೇಕು ಎಂದರು.  ಹಸಿರು ತರಕಾರಿ ಹಾಗೂ ಹಣ್ಣುಗಳಲ್ಲಿ ಪೊಟ್ಯಾಸಿಯಂ ಮತ್ತು ನಾರಿನ ಅಂಶ ಹೆಚ್ಚಿರುವುದರಿಂದ ಬಿ.ಪಿ. ಕಾಯಿಲೆ ಹತೋಟಿಗೆ ಸಹಾಯ ಮಾಡುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ಯೋಗ, ಧ್ಯಾನ, ನಗೆ ಕೂಟಗಳಲ್ಲಿ ಭಾಗವಹಿಸುವುದು ಆಗಾಗ ಪ್ರವಾಸ ಕೈಗೊಳ್ಕಬಹುದು ಎಂದು ಹೇಳಿದರು.