ದಾವಣಗೆರೆ : ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಡಾವಣೆ ಠಾಣೆಯ ಪೊಲೀಸರು ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಮಂಜುನಾಥ ಬಂಧಿತ ಆರೋಪಿ. 4 ವರ್ಷದ ತಮ್ಮ ಮಗಳು ತಾನ್ವಿಯನ್ನು ಶುಕ್ರವಾರ ರಾತ್ರಿ ನಗರದ ಬಾಪೂಜಿ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರು ಮಗುವನ್ನು ಪರೀಕ್ಷಿಸಿ ನೋಡಿದಾಗ ನಾಡಿ ಮಿಡಿತ ಇರಲಿಲ್ಲ, ಕೈ ಕಾಲು ತಣ್ಣಗಾಗಿದ್ದವು. ರಕ್ತದೊತ್ತಡ ರೆಕಾರ್ಡ್ ಆಗಿರಲಿಲ್ಲ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಲಾಗಿದೆ. ಈ ಎಲ್ಲ ವಿಷಯವನ್ನು ತಂದೆ, ತಾಯಿಗೆ ತಿಳಿಸಿ, ಮಗುವನ್ನು ತೀವ್ರ ನಿಗಾ ಘಟಕಕ್ಕೆ ಕಳುಹಿಸಿ ಕೊಡಲಾಯಿತು. ಆ ಸಂದರ್ಭದಲ್ಲಿ ಡಾ. ಸನ್ನಿಧಿ ನಾಯಕ್, ಡಾ.ಡಿ.ಎಸ್. ನಿಶಾಂತ್, ಡಾ. ಅಂಕುಶ್ ಕರ್ತವ್ಯ ನಿರ್ವಹಿಸುತ್ತಿದ್ದರು. ಮಗುವಿನ ಸ್ಥಿತಿ ಗಂಭೀರವಾಗಿ, ಉಸಿರಾಡಲು ತೊಂದರೆಯಾಗಿ ರಕ್ತ ಸ್ರಾವ ಆರಂಭವಾಯಿತು. ಮಗುವಿಗೆ ಸಿ.ಪಿ.ಆರ್ ಚಿಕಿತ್ಸೆ ಮಾಡುತ್ತಿರುವಾಗ ಮಗುವಿನ ತಂದೆ ಮಂಜುನಾಥ ಏಕಾಏಕಿ ಅಲ್ಲಿಗೆ ಬಂದು, ಅವಾಚ್ಯವಾಗಿ ಬೈದಾಡಿ, ತಲೆಯ ಕೂದಲು ಹಿಡಿದು, ಬಟ್ಟೆಯನ್ನು ಎಳೆದಾಡಿದರು. ಡಾ. ನಿಶಾಂತ್ ಅವರ ಹೊಟ್ಟೆಗೆ ಒದ್ದರು. ಡಾ. ಅಂಕುಶ್ ಅವರ ಮೇಲೂ ಹಲ್ಲೆ ಮಾಡಲಾಯಿತು ಎಂದು ದೂರಿನಲ್ಲಿ ಹೇಳಲಾಗಿದೆ. ಬಡಾವಣೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದ ಮಗು ತಾನ್ವಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.