ಜಿಲ್ಲೆ

6 ರಿಂದ ಬಿಎಸ್‌ಸಿ ಅಂಗಡಿಯಲ್ಲಿ ‘ಶ್ರಾವಣ ಸಂಭ್ರಮ’

ರಮೇಶ ಜಹಗೀರದಾರ್

ದಾವಣಗೆರೆ : ನಗರದ ಬಿ.ಎಸ್. ಚನ್ನಬಸಪ್ಪ ಆ್ಯಂಡ್ ಸನ್ಸ್ ಸಂಸ್ಥೆಯಲ್ಲಿ ಮಾರಾಟವಾಗುವ ಬಟ್ಟೆಗಳ ಮೇಲೆ ಡಬಲ್ ಡಿಸ್ಕೌಂಟ್ ನೀಡುವ ‘ಶ್ರಾವಣ ಸಂಭ್ರಮ’ ಕೊಡುಗೆ ಆ. 6 ರಿಂದ ಆರಂಭವಾಗಲಿದೆ ಎಂದು ಸಂಸ್ಥೆಯ ಮಾಲೀಕರಾದ ಬಿ.ಸಿ. ಚಂದ್ರಶೇಖರ್ ಮತ್ತು ಬಿ.ಸಿ. ಶಿವಕುಮಾರ್ ಹೇಳಿದರು.
 ಇಲ್ಲಿನ ಬಿಎಸ್‌ಸಿ ಎಕ್ಸ್‌ಕ್ಲೂಸಿವ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರಾವಣ ಮಾಸದಲ್ಲಿ ಅನೇಕ ಹಬ್ಬ, ಪೂಜೆಗಳು ಬರುವುದರಿಂದ ಅದಕ್ಕೆ ವಿಶೇಷ ಮಹತ್ವವಿದೆ. ಮಹಿಳೆಯರಿಗೆ ಇದು ಶ್ರೇಷ್ಠ ಮಾಸವಾಗಿದ್ದು ಹೊಸ ಬಟ್ಟೆಗಳನ್ನುಟ್ಟು ಸಂಭ್ರಮಿಸುತ್ತಾರೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ‘ಶ್ರಾವಣ ಸಂಭ್ರಮ’ ಕೊಡುಗೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
 ಯಾವಾಗಲೂ ದೊರೆಯುವ ಶೇ. 10 ರಿಯಾಯಿತಿಯೊಂದಿಗೆ ಶೇ. 10ರಷ್ಟು ವಿಶೇಷ ರಿಯಾಯಿತಿ ಇರಲಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಹೊಸ ಉತ್ಪನ್ನಗಳನ್ನು ನೀಡಲಾಗುವುದು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ನಡೆಯುವ ಡಿಸ್ಕೌಂಟ್ ವ್ಯಾಪಾರದಲ್ಲಿ ಮಾರಾಟವಾಗದೇ ಉಳಿದ ಬಟ್ಟೆಗಳ ಮೇಲೆ ರಿಯಾಯಿತಿ ನೀಡಲಾಗುತ್ತದೆ. ಆದರೆ ಶ್ರಾವಣ ಸಂಭ್ರಮದಲ್ಲಿ ಹೊಸತನವಿರುತ್ತದೆ. ಯೋಗ್ಯ ಬೆಲೆಗೆ ಹೊಸ ಬಟ್ಟೆಗಳನ್ನೇ ನೀಡಲಾಗುತ್ತದೆ ಎಂದು ಹೇಳಿದರು.
 ನಯನ ಮನೋಹರವಾದ ಸೀರೆಗಳು, ಮಹಿಳೆಯರ, ಪುರುಷರ ಬಟ್ಟೆಗಳು, ಮಕ್ಕಳ ಸಿದ್ಧ ಉಡುಪುಗಳು ಹಾಗೂ ಇತರ ಎಲ್ಲ ಬಟ್ಟೆಗಳ ಮೇಲೆ ಈ ರಿಯಾಯಿತಿ ಅನ್ವಯವಾಗುತ್ತದೆ. ನಗರದಲ್ಲಿರುವ ಸಂಸ್ಥೆಯ ಎಲ್ಲ ಅಂಗಡಿಗಳಲ್ಲಿ ಮತ್ತು ಬೆಳಗಾವಿಯ ಅಂಗಡಿಯಲ್ಲೂ ಈ ಕೊಡುಗೆ ಇರಲಿದೆ ಎಂದು ತಿಳಿಸಿದರು.
 ಸಾಮಾನ್ಯವಾಗಿ ಜನವರಿಯಿಂದ ಜೂನ್ ವರೆಗೆ ಮಾರಾಟ ನಡೆದು ಉಳಿಯುವ ಬಟ್ಟೆಗಳ ಮೇಲೆ ಡಿಸ್ಕೌಂಟ್ ನೀಡುವ ಪದ್ಧತಿ ಮಾರುಕಟ್ಟೆಯಲ್ಲಿ ನಡೆದುಕೊಂಡು ಬಂದಿದೆ. ಇದಕ್ಕಿಂತ ವಿಭಿನ್ನವಾಗಿ ಡಬಲ್ ಡಿಸ್ಕೌಂಟ್ ಕೊಡುಗೆಯನ್ನು ನಾಲ್ಕೈದು ವರ್ಷಗಳಿಂದ ತಮ್ಮ ಸಂಸ್ಥೆಯಲ್ಲಿ ನೀಡುತ್ತ ಬಂದಿರುವುದಾಗಿ ಹೇಳಿದರು.
 ವಿವಿಧ ಕಂಪನಿಯ ಮಿಲ್‌ಗಳಿಂದ ಬರುವ ಹೊಸ ವಿನ್ಯಾಸದ ಬಟ್ಟೆಗಳನ್ನು ಶ್ರಾವಣ ಸಂಭ್ರಮದಲ್ಲಿ ಪರಿಚಯಿಸಲಾಗುತ್ತದೆ. ಮಹಿಳೆಯರು ಹೊಸತನವನ್ನು ಬಯಸುತ್ತಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಗುಣಮಟ್ಟದ ಬಟ್ಟೆಗಳನ್ನು ಕೈಗೆಟುಕುವ ದರದಲ್ಲಿ ನೀಡಲಾಗುತ್ತದೆ. ಈ ಕೊಡುಗೆಗಾಗಿ ಬಹಳಷ್ಟು ಗ್ರಾಹಕರು ಕಾಯುತ್ತಾರೆ ಎಂದು ತಿಳಿಸಿದರು.
 ಶ್ರಾವಣ ಸಂಭ್ರಮ ಆ. 6 ರಿಂದ 31ರ ವರೆಗೆ ನಡೆಯಲಿದೆ. ಅಗತ್ಯವೆನಿಸಿದರೆ ವಿಸ್ತರಿಸುವ ಕುರಿತು ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ‘ಬನ್ನಿ, ನೋಡಿ ಆನಂದಿಸಿ, ನಂತರ ಖರೀದಿಸಿ’ ಎಂಬುದು ಶ್ರಾವಣ ಸಂಭ್ರಮದ ಟ್ಯಾಗ್‌ಲೈನ್ ಆಗಿದೆ ಎಂದು ಹೇಳಿದರು. ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಕೆ.ಎನ್. ಉಮೇಶ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.