ಜಿಲ್ಲೆ

ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಮನವಿ

Davanagere

ದಾವಣಗೆರೆ: ಇಲ್ಲಿನ ಗಾಂಧಿನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಸಿ.ಆಂಜಿನಪ್ಪ ಕಡತಿ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಮಹಾನಗರ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಗಾಂಧಿನಗರ ಅಂಬೇಡ್ಕರ್ ವೃತ್ತದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನವು ಸಂಪೂರ್ಣ ಶಿಥಿಲಗೊಂಡಿದ್ದು, ಅದನ್ನು ನೆಲಸಮ ಮಾಡಿ, ನೂತನ ಮಾದರಿಯ ಕಟ್ಟಡವನ್ನು ನಿರ್ಮಿಸಬೇಕು.

ಸ್ಮಶಾನ ರಸ್ತೆಯಲ್ಲಿರುವ ವ್ಯಾಯಾಮ ಶಾಲೆ ಹಾಗೂ ವಾಚನಾಲಯ ಕಟ್ಟಡವು ಸಂಪೂರ್ಣ ಶಿಥಿಲಗೊಂಡಿದ್ದು ಅಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು. ಅಂಬೇಡ್ಕರ್ ಪಾರ್ಕ್ ಬಳಿ ಹಳೆಯ ಬಸ್ ನಿಲ್ದಾಣವಿದ್ದು, ಬೀಳುವ ಸ್ಥಿತಿಯಲ್ಲಿರುವ ಅದನ್ನು ನೆಲಸಮ ಮಾಡಿ, ಸ್ಮಾರ್ಟ್ ಬಸ್ ನಿಲ್ದಾಣವನ್ನು ನಿರ್ಮಿಸಬೇಕು.

ಕಡ್ಲೆಭಟ್ಟಿಯಿಂದ ಗಾಂಧಿನಗರ ಪೊಲೀಸ್ ಠಾಣೆಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ಮತ್ತು ನೂತನ ಮಾದರಿಯ ಫುಟ್‌ಪಾತ್‌ಗಳನ್ನು ನಿರ್ಮಿಸಬೇಕು.

ಹುಲಿಗೆಮ್ಮ ದೇವಸ್ಥಾನದಿಂದ ರುದ್ರಭೂಮಿಯವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ನವೀನ ಮಾದರಿಯ ಫುಟ್‌ಪಾತ್ ನಿರ್ಮಿಸಿ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಂ.ಅಂಜಿನಪ್ಪ, ಮಂಜುನಾಥ್, ಡಿ.ಮಲ್ಲಿಕಾರ್ಜುನ, ಆಚಾರ್ಯ ಇದ್ದರು.