ದಾವಣಗೆರೆ : ಅನುದಾನ ಬಳಕೆಯಲ್ಲಿ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆ ಮುಂದೆ ಇದ್ದು, ಮಾದರಿಯಾಗಿ ಅಭಿವೃದ್ಧಿಪಡಿಸಲು ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ನಗರದ 26, 28,30,31 ಮತ್ತು 37ನೇ ವಾರ್ಡ್‌ಗಳಲ್ಲಿ 7.5 ಕೋಟಿ ರೂ.ಗಳ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಈ ಹಿಂದೆ ಜಿಲ್ಲೆಯ ಎಲ್ಲ ಕ್ಷೇತ್ರಗಳಿಗೂ ಸಾವಿರಾರು ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಮಾಡಿದ್ದೆವು. ಅದೇ ರೀತಿ ಈಗಲೂ ಎಲ್ಲ ಶಾಸಕರು ಸೇರಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕೆ.ಟಿ.ಜೆ. ನಗರದಲ್ಲಿ ಬರುವ ಐ.ಡಿ.ಎಸ್.ಎಂ.ಟಿ. ಮಳಿಗೆ ಹತ್ತಿರದಲ್ಲಿ ರಸ್ತೆ ಅಭಿವೃದ್ಧಿ ಮತ್ತು ಪೇವರ್ಸ್ ಅಳವಡಿಸುವುದು, ಕೆ.ಟಿ.ಜೆ. ನಗರ 2ನೇ ಮೇನ್ 5ನೇ ಕ್ರಾಸ್ ಮತ್ತು ಗರಡಿ ಮನೆ ಹತ್ತಿರದ ರಸ್ತೆ ಬದಿಗೆ ಪೇವರ್ಸ್ ಅಳವಡಿಸುವುದು ಹಾಗೂ ಕೆ.ಟಿ.ಜೆ.ನಗರದ 9ನೇ ಕ್ರಾಸ್‌ನಲ್ಲಿರುವ ವಿದ್ಯಾರ್ಥಿ ಭವನ ಸರ್ಕಲ್ ಹಿಂಭಾಗದಿಂದ 3ನೇ ಮೇನ್‌ವರೆಗೆ ಸಿ.ಸಿ ಚರಂಡಿ ನಿರ್ಮಿಸಿ ಕವರಿಂಗ್ ಸ್ಲ್ಯಾಬ್ ಅಳವಡಿಸುವುದು ಮತ್ತು 2ನೇ ಮೇನ್‌ನಿಂದ 1ನೇ ಮೇನ್‌ವರೆಗೆ ರಸ್ತೆ ಬದಿ ಪೇವರ್ಸ್ ಅಳವಡಿಸುವ ಕಾಮಗಾರಿ. ಕೆ.ಟಿ.ಜೆ. ನಗರದ ಐ.ಡಿ. ಎಸ್.ಎಂ.ಟಿ. ಯೋಜನೆಯ ಮಳಿಗೆಯ ಹತ್ತಿರ ಮತ್ತು ಜಂಡೇಕಟ್ಟೆ ಹತ್ತಿರ 3, 4 ಮತ್ತು 5ನೇ ಕ್ರಾಸ್‌ಗೆ ಹಾಗೂ ಶ್ರೀ ಶನೇಶ್ವರ ದೇವಸ್ಥಾನದ ಹತ್ತಿರ ರಸ್ತೆ ಬದಿ ಪೇವರ್ ಅಳವಡಿಸುವ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಸದಸ್ಯರಾದ ಜೆ.ಎನ್.ಶ್ರೀನಿವಾಸ್, ಶ್ವೇತಾ ಶ್ರೀನಿವಾಸ್, ಪಾಮೇನಹಳ್ಳಿ ಗೌಡ್ರು ನಾಗರಾಜ್, ಕೆ.ಚಮನ್ ಸಾಬ್, ಎ.ನಾಗರಾಜ್, ಜಯಮ್ಮ ಗೋಪಿನಾಯ್ಕ, ಆಯುಕ್ತೆ ರೇಣುಕಾ ಇದ್ದರು.