ಜಿಲ್ಲೆ

ಡೆಂಘೆ ನಿಯಂತ್ರಣಕ್ಕೆ ಕೋವಿಡ್ ಮಾದರಿ ರೂಲ್ಸ್

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ : ರಾಜ್ಯದಲ್ಲಿ ಆತಂಕ ಮೂಡಿಸಿರುವ ಡೆಂಘೆ ನಿಯಂತ್ರಣಕ್ಕೆ ಸರ್ಕಾರ ಕೋವಿಡ್ ಮಾದರಿಯ ನಿಯಮಗಳ ಅಸ್ತ್ರವನ್ನು ಪ್ರಯೋಗಿಸಿದೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ನಡೆಸಿದ ಮಹತ್ವದ ಸಭೆಯ ನಂತರ ಕಟ್ಟುನಿಟ್ಟಿನ ರೂಲ್ಸ್ ಜಾರಿಗೆ ಬಂದಿವೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ಹೆಚ್ಚುವರಿ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.  ನೂರು ಮೀಟರ್ ವ್ಯಾಪ್ತಿಯಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಡೆಂಘೆ ಕೇಸ್‌ಗಳು ಕಂಡುಬಂದರೆ ಅಂಥ ಪ್ರದೇಶಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಬೇಕು. ಅವುಗಳ ನಿಖರ ಮಾಹಿತಿಯನ್ನು ರಾಜ್ಯದ ವಾರ್ ರೂಮ್‌ಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.  ಹಾಟ್‌ಸ್ಪಾಟ್‌ಗಳಲ್ಲಿ ಲಾರ್ವಾ ನಾಶ ಚಟುವಟಿಕೆಯನ್ನು ತೀವ್ರಗೊಳಿಸಬೇಕು. ಅಂಥ ಕಡೆಗಳಲ್ಲಿ ಫೀವರ್ ಕ್ಲಿನಿಕ್ ಸಕ್ರಿಯಗೊಳಿಸುವ ಮೂಲಕ ಆ ಪ್ರದೇಶದಲ್ಲಿ ಬೇರೆ ಯಾರಿಗಾದರೂ ಜ್ವರದ ಲಕ್ಷಣಗಳಿದ್ದರೆ ಪತ್ತೆಹಚ್ಚಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆ ನಿರೋಧಕ ಬೇವಿನ ಎಣ್ಣೆ ವಿತರಿಸುವಂತೆ ಸುತ್ತೋಲೆಯಲ್ಲಿ ಹೇಳಲಾಗಿದೆ.  ರಾಜ್ಯದ ದೈನಂದಿನ ಡೆಂಘೆ ಜ್ವರ ಪರಿಸ್ಥಿತಿಯ ಸೂಕ್ಷ್ಮ ಮೇಲ್ವಿಚಾರಣೆ ಹಾಗೂ ಉಸ್ತುವಾರಿಗಾಗಿ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ‘ಡೆಂಘೆ ವಾರ್ ರೂಮ್’ ಸಕ್ರಿಯಗೊಳಿಸಲಾಗುತ್ತಿದೆ.  ಎಲ್ಲ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಪರಿಸ್ಥಿತಿ ಮೇಲ್ವಿಚಾರಣೆ, ದತ್ತಾಂಶ ಸಂಗ್ರಹಣೆಗಾಗಿ ಕಂಟ್ರೋಲ್ ರೂಮ್ ಹಾಗೂ ಡೆಂಘೆ ವಾರ್ ರೂಮ್ ಸಕ್ರಿಯಗೊಳಿಸಲಾಗುತ್ತಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋರ್ಸ್‌ಗಳನ್ನು ರಚಿಸಲಾಗಿದೆ.  ಪ್ರತಿ ಡೆಂಘೆ ಜ್ವರದ ಪ್ರಕರಣವನ್ನು ರೋಗ ಲಕ್ಷಣಗಳು ಕಂಡುಬಂದ ದಿನದಿಂದ ಆರೋಗ್ಯ ಸ್ಥಿತಿಯ ಬಗ್ಗೆ 14 ದಿನಗಳ ಕಾಲ ಅನುಪಾಲನೆ ಮಾಡಬೇಕಾಗುತ್ತದೆ.  ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 5, ಜಿಲ್ಲಾ ಆಸ್ಪತ್ರೆಗಳಲ್ಲಿ 8-10 ಬೆಡ್‌ಗಳನ್ನು ಮೀಸಲಿಡುವುದು. ಅಷ್ಟು ಸಂಖ್ಯೆಯ ಪ್ರಕರಣಗಳು ಇಲ್ಲದಿದ್ದರೆ ಹಾಸಿಗೆಗಳನ್ನು ಇತರ ರೋಗಿಗಳ ಆರೈಕೆಗೆ ಬಳಸಬಹುದಾಗಿದೆ.  ಮೆಡಿಕಲ್ ಕಾಲೇಜುಗಳ ಕುಟುಂಬ ದತ್ತು ಕಾರ್ಯಕ್ರಮವನ್ನು ಡೆಂಘೆ ಸಮಸ್ಯಾತ್ಮಕ ಗ್ರಾಮ, ವಾರ್ಡ್‌ಗಳಿಗೆ ವಿಸ್ತರಿಸಲು ಸೂಚನೆ ನೀಡಲಾಗಿದೆ.  ಡೆಂೆ ಕೇಸ್‌ಗಳ ಪರೀಕ್ಷೆ, ಚಿಕಿತ್ಸೆ ಹಾಗೂ ನಿರ್ವಹಣೆಯ ಸೌಲಭ್ಯಗಳು (ಐಸಿಯು ಸೇರಿ) ಇಲಾಖೆ ವ್ಯಾಪ್ತಿಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಸಂಪೂರ್ಣ ಉಚಿತವಾಗಿ ಸಿಗಲಿವೆ.  ...

 (ಕೋಟ್)  
ಸರ್ಕಾರದ ಸುತ್ತೋಲೆ ಆಧರಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸರ್ಕಾರದ ಆಸ್ಪತ್ರೆಗಳಲ್ಲಿ ಔಷಧಗಳು ಲಭ್ಯ ಇವೆ. ಅಗತ್ಯವಿದ್ದಾಗ ಬ್ಲಡ್‌ಬ್ಯಾಂಕ್‌ಗಳಿಂದ ಪ್ಲೇಟ್‌ಲೆಟ್ ಪಡೆಯಲಾಗುವುದು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶಪಡಿಸುವುದು, ಆಸ್ಪತ್ರೆಗಳಲ್ಲಿ ಬೆಡ್ ಮೀಸಲಿಡುವುದು, ಸ್ವಚ್ಛತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  

ಡಾ. ಷಣ್ಮುಖಪ್ಪ, ಡಿಎಚ್‌ಒ, ದಾವಣಗೆರೆ