ದಾವಣಗೆರೆ : ಮುಖ್ಯಮಂತ್ರಿ ಅವರ ಮಹತ್ವಾಕಾಂಕ್ಷೆಯ ಜನತಾದರ್ಶನ ಕಾರ್ಯಕ್ರಮದ ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 1,599 ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಿ, 1,516 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಚನ್ನಗಿರಿ ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ 48 ವರ್ಷಗಳಷ್ಟು ಹಳೆಯ ಗ್ರಾಮಠಾಣ ಇ-ಸ್ವತ್ತು ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ನಲವತ್ತು ವರ್ಷದಿಂದ ಮಾಳಗೊಂಡನಹಳ್ಳಿಯಲ್ಲಿ ವಾಸಿಸುತ್ತಿದ್ದ ಜನವಸತಿ ಪ್ರದೇಶವನ್ನು ಗಾಮಠಾಣ ವಿಸ್ತರಣೆ ಮಾಡಿ ಅಮ್ಮತನಗರ ಗ್ರಾಮವನ್ನಾಗಿ ಇ ಸ್ವತ್ತು ವಿತರಣೆ ಮಾಡಲಾಗಿದೆ. ಬೆಳವನೂರು ಮತ್ತು ತುರ್ಚಘಟ್ಟ ಗ್ರಾಮದ ಸ್ಮಶಾನಗಳನ್ನು ಅಳತೆ ಮಾಡಿಸಿ, ಒತ್ತುವರಿ ತೆರವುಗೊಳಿಸಿ ಹದ್ದುಬಸ್ತು ಮಾಡಿಸಿ ಗ್ರಾಮಸ್ಥರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ರೈತರು ಬರ ಪರಿಹಾರದ ಇನ್‌ಪುಟ್ ಸಬ್ಸಿಡಿ ಪಡೆಯಲು ಜಮೀನಿನ ವಿವರವನ್ನು ಫ್ರೂಟ್ಸ್ ತತ್ರಾಂಶಕ್ಕೆ ಕಡ್ಡಾಯವಾಗಿ ದಾಖಲಿಸಬೇಕಾಗಿರುತ್ತದೆ. ಇದರ ಅಡಿಯಲ್ಲಿ ಅತಿಹೆಚ್ಚು ಪ್ಲಾಟ್ಗಳನ್ನು ನೋಂದಣಿ ಮಾಡಿದ್ದು, ಶೇಕಡವಾರು ಪ್ರಗತಿಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ 3 ನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಆರ್‌ಟಿಸಿ ತಿದ್ದುಪಡಿ ಮಾಡಲು ಆಂದೋಲನವನ್ನು ಕೈಗೊಂಡು 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಿ ಆರು ತಿಂಗಳಲ್ಲಿ ಜನಸ್ನೇಹಿ ಆಡಳಿತ ನೀಡಲಾಗಿದೆ ಎಂದು ಹೇಳಿದ್ದಾರೆ.
ಪಹಣಿ ತಿದ್ದುಪಡಿಯಡಿ ಮೇ ಅಂತ್ಯಕ್ಕೆ 5,039 ಅರ್ಜಿಗಳು ಬಾಕಿ ಇದ್ದು ಜೂನ್ 23 ರಿಂದ ನ. 23 ರವರೆಗೆ ಹೊಸದಾಗಿ ಸ್ವೀಕೃತವಾದ 4438 ಅರ್ಜಿಗಳು ಸೇರಿ 9477 ಪಹಣಿ ತಿದ್ದುಪಡಿ ಅರ್ಜಿಗಳಲ್ಲಿ 5637 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಜಮೀನಿನ ಹಕ್ಕು ಬದಲಾವಣೆ, ಮ್ಯುಟೇಷನ್ ಪ್ರಕರಣಗಳ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದಿದ್ದಾರೆ.
ಸರ್ಕಾರಿ ಜಮೀನುಗಳ ಟ್ಯಾಗ್ ಮಾಡಲಾಗಿದೆ. ಎಲ್ಲ ತಾಲೂಕುಗಳ ತಹಸೀಲ್ದಾರ್ ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಸೆಪ್ಟೆಂಬರ್ ತಿಂಗಳಿಂದ ಇ-ಆಫೀಸ್‌ನಲ್ಲಿ ಕಾರ್ಯ ನಿರ್ವಹಣೆ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಗುರುತಿಸಲಾಗಿರುವ 80 ಜನವಸತಿಗಳ ಪೈಕಿ ಈಗಾಗಲೇ 46 ಅನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ. ಉಳಿದ 34 ಜನ ವಸತಿಗಳಿಗೆ ಸಂಬಂಧಿಸಿ ನಿರಂತರವಾಗಿ ಕ್ಷೇತ್ರ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ದಾಖಲೆಗಳ ಪರಿಶೀಲನೆ ಕೈಗೊಂಡು 30 ಜನವಸತಿಗಳ ಪ್ರಸ್ತಾವನೆಗಳನ್ನು ಪ್ರಾಥಮಿಕ ಅಧಿಸೂಚನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ.
ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ 6 ತಿಂಗಳಲ್ಲಿ 9,532 ಫಲಾನುಭವಿಗಳಿಗೆ ಪಿಂಚಣಿ ಮಂಜೂರು ಮಾಡಲಾಗಿದೆ. ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಡಿ 562 ಪ್ರಕರಣಗಳಲ್ಲಿ ಸಹಾಯಧನ ವಿತರಿಸಲು ಹಾಗೂ 7 ರೈತರ ಆತ್ಮಹತ್ಯೆ ಪ್ರಕರಣಗಳು, 5 ರೈತರ ಆಕಸ್ಮಿಕ ಮರಣ, ಹಾವು ಕಡಿತ ಪ್ರಕರಣಗಳು ಮತ್ತು 20 ಬಣವೆ ನಷ್ಟ ಪ್ರಕರಣಗಳಲ್ಲಿ ಪರಿಹಾರ ವಿತರಿಸಲಾಗಿದೆ.
ಜಿಲ್ಲೆಯ ತಾಲೂಕು ಕಚೇರಿಗಳಲ್ಲಿನ ಕಂದಾಯ ದಾಖಲೆಗಳು ಮತ್ತು ಕಡತಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದ್ದು ಪ್ರಸ್ತುತ ದಾವಣಗೆರೆ ಹಾಗೂ ಹರಿಹರ ತಾಲೂಕುಗಳಲ್ಲಿ ಪುಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.