ದಾವಣಗೆರೆ : ‘ನಾನು ಜಿಲ್ಲಾಧಿಕಾರಿ ಮಾತನಾಡುತ್ತಿದ್ದೇನೆ. ನಿಮ್ಮ ಸಮಸ್ಯೆ ಏನು ಕೇಳಿ. ಅಧಿಕಾರಿಗಳಿಗೆ ಸೂಚನೆ ಕೊಟ್ಟು ಶೀಘ್ರವಾಗಿ ಬಗೆಹರಿಸುತ್ತೇನೆ. ಕಾನೂನು ಚೌಕಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ’.
ದಾವಣಗೆರೆಯ ವಿಜಯವಾಣಿ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ದೂರವಾಣಿ ಕರೆ ಮಾಡಿದ ಜಿಲ್ಲೆಯ ಜನರಿಗೆ ನೂತನ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಸ್ಪಂದಿಸಿದ ರೀತಿ ಇದು.
ಒಂದೂವರೆ ಗಂಟೆ ಕಾಲ ನಿರಂತರವಾಗಿ ಬಂದ 36 ಕರೆಗಳನ್ನು ಸ್ವೀಕರಿಸಿದ ಡಿಸಿ, ಎಲ್ಲರಿಗೂ ಸಮಾಧಾನದಿಂದ ಉತ್ತರಿಸಿದರು. ಒಂದು ವಾರದ ಕೆಳಗೆ ಅಧಿಕಾರ ಸ್ವೀಕರಿಸಿರುವ ಅವರಿಗೆ ಫೋನ್-ಇನ್ ಕಾರ್ಯಕ್ರಮ ಜಿಲ್ಲೆಯ ಜನರ ನಾಡಿಮಿಡಿತ ಅರಿಯಲು ನೆರವಾಯಿತು.
ಬೆಳೆ ವಿಮೆ, ಬಗ್‌ಹುಕುಂ, ಪೋಡಿ ಸಮಸ್ಯೆ, ಪಹಣಿಯಲ್ಲಿ ಆಗಿರುವ ವ್ಯತ್ಯಾಸ, ಬೀದಿ ದೀಪಗಳಿಗೆ ಬೇಡಿಕೆ, ರಸ್ತೆ ಒತ್ತುವರಿ, ಕುಡಿಯುವ ನೀರಿನ ತೊಂದರೆ, ಭದ್ರಾ ನೀರನ್ನು ನಾಲೆಗಳಿಗೆ ಹರಿಸುವುದು, ಆರೋಗ್ಯ, ಶಿಕ್ಷಣ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪ್ರಶ್ನೆಗಳು ಎದುರಾದವು. ಜನರ ಆ ಎಲ್ಲ ಅಹವಾಲುಗಳಿಗೆ ಕಿವಿಯಾದ ಡಾ.ಎಂ.ವಿ. ವೆಂಕಟೇಶ್, ಜಿಲ್ಲಾಡಳಿತ ನಿಮ್ಮ ಜತೆಗಿದೆ, ಒಂದೊಂದಾಗಿ ಎಲ್ಲವನ್ನೂ ಪರಿಹರಿಸುತ್ತೇವೆ ಎನ್ನುವ ಭರವಸೆ ನೀಡಿದರು.
ಅವರ ಮಾತುಗಳಲ್ಲಿ ಕಳಕಳಿ ಇತ್ತು. ಜಿಲ್ಲೆಗೆ ಏನಾದರೂ ಮಾಡಬೇಕು ಎನ್ನುವ ತುಡಿತವಿತ್ತು. ಕೆಲವರಂತೂ ನೂತನ ಜಿಲ್ಲಾಧಿಕಾರಿಗೆ ಅಭಿನಂದನೆ ಹೇಳಿದರು. ಮತ್ತೆ ಕೆಲವರ ಮಾತುಗಳು ಭಾವನಾತ್ಮಕವಾಗಿದ್ದವು. ‘ನಾನು ನಿಮ್ಮ ಮಗಳೆಂದು ಭಾವಿಸಿ ಕೆಲಸ ಮಾಡಿಸಿ ಕೊಡಿ’ ಎಂದು ಮಹಿಳೆಯೊಬ್ಬರು ಮನವಿ ಮಾಡಿದರು. ಅಷ್ಟೇ ವಿನಮ್ರವಾಗಿ ಡಿಸಿ ಸ್ಪಂದಿಸಿದರು. ತಿಂಗಳಿಗೊಮ್ಮೆ ನಮ್ಮೂರಿಗೆ ನೀವು ಬರಬೇಕು ಎಂಬ ಆಗ್ರಹಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
...
* ಜಿಲ್ಲಾಡಳಿತದ ಸಭೆಯಲ್ಲಿ ಪ್ರಸ್ತಾಪ
ವಿಜಯವಾಣಿ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ಅಹವಾಲುಗಳ ಬಗ್ಗೆ ಜಿಲ್ಲಾಡಳಿತದ ಮುಂದಿನ ಸಭೆಗಳಲ್ಲಿ ಪ್ರಸ್ತಾಪಿಸಿ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಯಿತು. ನಾನು ಅಧಿಕಾರ ವಹಿಸಿಕೊಂಡು ಒಂದು ವಾರವಷ್ಟೇ ಆಗಿದೆ. ಆರೂ ತಾಲೂಕುಗಳ ರೈತರು, ಮಹಿಳೆಯರು, ಯುವಕರು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತ ಮನಸ್ಸಿನಿಂದ ಹೇಳಿಕೊಂಡಿದ್ದಾರೆ. ಪೋಡಿ, ಬಗರ್‌ಹುಕುಂ, ಬೀದಿದೀಪ, ಬೆಳೆ ವಿಮೆ, ಗೃಹಲಕ್ಷ್ಮೀ, ಆಧಾರ್ ನೋಂದಣಿ, ಒತ್ತುವರಿ ಇನ್ನಿತರ ಸಮಸ್ಯೆಗಳ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ ಎಂದು ತಿಳಿಸಿದರು.
ಇವುಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡುವುದಾಗಿ ತಿಳಿಸಿ, ಜನರ ನಾಡಿಮಿಡಿತ ಅರಿಯಲು ನೆರವಾದ ವಿಜಯವಾಣಿಗೆ ಧನ್ಯವಾದ ಹೇಳಿದರು.
...
* ರಸ್ತೆ ಗುಂಡಿ ಮುಚ್ಚಲು ಕ್ರಮ
ಅತಿವೃಷ್ಟಿಯಿಂದ ಜಿಲ್ಲೆಯ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಡಿಸಿ, ಮಳೆ ನಿಂತ ಮೇಲೆ ಗುಂಡಿಗಳ ಸರ್ವೇ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ಮಹಾನಗರ ಪಾಲಿಕೆ, ಪುರಸಭೆ ಇನ್ನಿತರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ. ಕೆಲವು ಕಡೆ ಕುಡಿಯುವ ನೀರು, ಒಳಚರಂಡಿ ಪೈಪ್‌ಲೈನ್ ಅಳವಡಿಸುವ ವೇಳೆ ತೆಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ತಿಳಿಸಿರುವುದಾಗಿ ಹೇಳಿದರು.
...