ಜಿಲ್ಲೆ

ನೆಲ, ಜಲ ಕಾಪಾಡಲು ಇಲ್ಲ ಅನುದಾನ ಕೊರತೆ

ರಮೇಶ ಜಹಗೀರದಾರ್

ದಾವಣಗೆರೆ :  ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಬಹಳಷ್ಟು ಅನುದಾನ ಲಭ್ಯವಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ನೆಲ, ಜಲ ಕಾಪಾಡಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಸೂಚನೆ ನೀಡಿದರು.  ಜಿಲ್ಲಾಡಳಿತ ಭವನದಲ್ಲಿ ಸೋಮವಾರ, ನೆಲ, ಜಲ ವಿಷಯವಾಗಿ ಅಧಿಕಾರಿಗಳು, ರೈತ ಮುಖಂಡರು, ಪರಿಸರ ಸಂರಕ್ಷಣೆ ಆಸಕ್ತರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದರು.  ಕೇಂದ್ರದಿಂದ 4 ಸಾವಿರ ಕೋಟಿ ರೂ. ಅನುದಾನ ರಾಜ್ಯಕ್ಕೆ ಬರುತ್ತದೆ. ಅದರಲ್ಲಿ 200 ರಿಂದ 300 ಕೋಟಿ ರೂಗಳನ್ನು ಜಿಲ್ಲೆಗೆ ತರಲು ಅವಕಾಶವಿದೆ. ಬೂದು ನೀರು, ಕಪ್ಪು ನೀರು ನಿರ್ವಹಣೆ, ಮಳೆನೀರು ಕೊಯ್ಲು ಇನ್ನಿತರ ಉದ್ದೇಶಗಳಿಗೆ ಯೋಜಿತವಾಗಿ ಅದನ್ನು ಬಳಸಬೇಕು ಎಂದು ತಿಳಿಸಿದರು.  ತಮಿಳುನಾಡಿನಲ್ಲಿ ಅಲ್ಲಿನ ಅಧಿಕಾರಿಗಳ ವಿಶೇಷ ಆಸಕ್ತಿಯಿಂದಾಗಿ ಮಳೆನೀರು ಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅದಕ್ಕೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಹಳ ಹಿಂದಿದ್ದೇವೆ ಎಂದು ಹೇಳಿದರು.  ಮಾಯಕೊಂಡ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಿವೆ. ಅಂಥ ಪ್ರದೇಶಗಳನ್ನು ಗುರುತಿಸಿ ಮಳೆನೀರು ಕೊಯ್ಲು ಕಾರ್ಯವನ್ನು ಈಗಿನಿಂದಲೇ ಆರಂಭಿಸಬೇಕು. ಜಿಲ್ಲೆಯ ಹಾಸ್ಟೆಲ್‌ಗಳಲ್ಲೂ ಈ ಕೆಲಸ ಆಗಬೇಕು ಎಂದು ತಿಳಿಸಿದರು.  ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಹೆಚ್ಚುವರಿ ಡಿಸಿ ಶೀಲವಂತ ಶಿವಕುಮಾರ್, ಪಾಲಿಕೆ ಆಯುಕ್ತೆ ರೇಣುಕಾ ಇನ್ನಿತರ ಅಧಿಕಾರಿಗಳಿದ್ದರು.