ದಾವಣಗೆರೆ : ರಾಷ್ಟ್ರೀಯ ಹಾಗೂ ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜನರ ಆಸ್ತಿ ನಷ್ಟ ತಡೆಗಟ್ಟಲು ಹಾಗೂ ರಕ್ಷಣೆಗೆ ಅನುಕೂಲವಾಗುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭದಲ್ಲಿ ಸಂವಹನಕ್ಕಾಗಿ ಸೈರನ್‌ಗಳನ್ನು ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದರು. ಅಂಥ ಸಂದರ್ಭವನ್ನು ನಿಭಾಯಿಸಲು ಮತ್ತು ತುರ್ತಾಗಿ ಜನರಿಗೆ ಮಾಹಿತಿ ತಲುಪಿಸುವ ಉದ್ದೇಶದಿಂದ ಹಾಗೂ ಜಾಗೃತರಾಗಿರಲು ಈ ಕ್ರಮ ಅಗತ್ಯವಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮೂರು ಕಡೆ ಸೈರನ್ ಅಳವಡಿಸಬೇಕು. ಅವುಗಳು ಕನಿಷ್ಠ 50 ಕಿ.ಮೀ. ಅಂತರದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ತುರ್ತು ಸಂದರ್ಭದಲ್ಲಿ ಜನರು ಗಾಬರಿಯಾಗದಂತೆ ಮತ್ತು ರಕ್ಷಣೆ ಪಡೆಯಲು ಸಲಹೆ ಮತ್ತು ಮುಂಜಾಗ್ರತಾ ಕ್ರಮಗಳ ಸೂಚನೆ ನೀಡಬೇಕು. ವಿಕೋಪದಲ್ಲಿ ಸಿಲುಕಿದಾಗ ರಕ್ಷಣಾತ್ಮಕ ಕ್ರಮಗಳ ಜತೆಗೆ ಜೀವಹಾನಿಯನ್ನು ತಡೆಗಟ್ಟಲು ಸನ್ನದ್ಧವಾಗಿರಬೇಕು. ಇದಕ್ಕಾಗಿ ಆಸ್ಪತ್ರೆಯಲ್ಲಿನ ತುರ್ತು ನಿಗಾ ಘಟಕ, ವೈದ್ಯರ ತಂಡ, ರಕ್ಷಣಾತ್ಮಕ ಕ್ರಮಗಳ ಬಗ್ಗೆ ಕ್ಷಿಪ್ರ ಕಾರ್ಯಾಚರಣೆ ಕೈಗೊಳ್ಳುವ ನಿಟ್ಟಿನಲ್ಲಿ 24/7 ಸಿದ್ಧರಾಗಿರುವಂತೆ ತಂಡಗಳನ್ನು ರಚನೆ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಯೋಜನೆ ತಯಾರಿಸಬೇಕು ಎಂದರು. ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್, ಎಸ್ಪಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪ ವಿಭಾಗಾಧಿಕಾರಿ ಸಂತೋಷ್ ಪಾಟೀಲ್, ಅಭಿಷೇಕ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ... (ಬಾಕ್ಸ್) ದಾಮಿನಿ ಆ್ಯಪ್ ಡೌನ್‌ಲೋಡ್ ಮಾಡಿ ಪೂರ್ವ ಮುಂಗಾರು ಸಂದರ್ಭದಲ್ಲಿ ಸಿಡಿಲು ಬಡಿದು ಜನರು ಮತ್ತು ಜಾನುವಾರುಗಳ ಸಾವು ಆಗುವುದನ್ನು ತಪ್ಪಿಸಿಕೊಳ್ಳಲು ಸಿಡಿಲಿನ ಮುನ್ನೆಚ್ಚರಿಕೆ ಮಾಹಿತಿ ತಿಳಿದುಕೊಳ್ಳಲು ಮೊಬೈಲ್ನಲ್ಲಿ ಪ್ಲೇಸ್ಟೋರ್‌ನಿಂದ ಕೇಂದ್ರ ಸರ್ಕಾರದ ದಾಮಿನಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದು ಮಳೆ ಬರುವಾಗ ಸುತ್ತಮುತ್ತಲಿನಲ್ಲಿ ಸಿಡಿಲು ಅಪ್ಪಳಿಸುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಿದೆ. ಇದರಿಂದ ಕುರಿಗಾಹಿಗಳು, ಜಾನುವಾರುಗಳ ರಕ್ಷಣೆ ಮತ್ತು ಜೀವ ರಕ್ಷಣೆ ಪಡೆದುಕೊಳ್ಳಬಹುದಾಗಿದೆ ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು. ಜೂನ್‌ನಿಂದ ಮುಂಗಾರು ಮತ್ತು ಶಾಲಾ ಕಾಲೇಜುಗಳು ಆರಂಭವಾಗಲಿವೆ. ಶಿಥಿಲವಾಗಿರುವ ಶಾಲಾ ಕೊಠಡಿಗಳ ದುರಸ್ತಿಯನ್ನು ತಕ್ಷಣವೇ ಕೈಗೊಳ್ಳಬೇಕು. ಬಹಳ ಶಿಥಿಲವಾಗಿರುವ ಕೊಠಡಿಗಳನ್ನು ಗುರುತಿಸಿ ರಿಪೇರಿಗೆ ಕ್ರಿಯಾಯೋಜನೆ ತಯಾರಿಸಿ ನೀಡಲು ಉಪ ನಿರ್ದೇಶಕರಿಗೆ ತಿಳಿಸಿ, ಎಲ್ಲ ಶಾಲೆಗಳ ಸ್ಥಿತಿಗತಿ ಹಾಗೂ ಸುಸ್ಥಿತಿ ಬಗ್ಗೆ ಆಡಿಟ್ ವರದಿ ಪರಿಶೀಲಿಸಿ ನೀಡಲು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದವರಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿನ ಕೆರೆಗಳು ಮತ್ತು ಚೆಕ್‌ಡ್ಯಾಮ್‌ಗಳ ಸುಸ್ಥಿತಿ ಬಗ್ಗೆ ಮತ್ತು ರಸ್ತೆ, ಕಾಲುವೆಗಳಲ್ಲಿನ ಕಿರು ಸೇತುವೆಗಳ ಪರಿಶೀಲನೆ ನಡೆಸಿ ಆಯಾ ಇಲಾಖೆಯವರು ವರದಿ ನೀಡಬೇಕು ಎಂದು ತಿಳಿಸಿದರು. ಇದೇ ವೇಳೆ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್, ಕೊಡಗನೂರು ಕೆರೆ ಏರಿಯ ದುರಸ್ತಿ ಕೆಲಸ ನಡೆಯುತ್ತಿದ್ದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಚಿತ್ರ: ಡಿವಿಜಿ ಡಿಸಿ ಆಫೀಸ್ ಮೀಟಿಂಗ್ ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿ.ಎಂ. ಗಂಗಾಧರ ಸ್ವಾಮಿ, ಸುರೇಶ ಬಿ. ಇಟ್ನಾಳ್, ಉಮಾ ಪ್ರಶಾಂತ್, ಪಿ.ಎನ್. ಲೋಕೇಶ್ ಇನ್ನಿತರ ಅಧಿಕಾರಿಗಳು ಇದ್ದರು.