ಜಿಲ್ಲೆ

ಜಿಲ್ಲೆಯ 5 ಕಡೆ ಖರೀದಿ ಕೇಂದ್ರ ಸ್ಥಾಪನೆ

ರಮೇಶ ಜಹಗೀರದಾರ್

ದಾವಣಗೆರೆ :  ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ರಾಗಿ ಮತ್ತು ಜೋಳದ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯ 5 ಕಡೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.  ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿ, ರಾಗಿ ಖರೀದಿ ಕೇಂದ್ರಗಳನ್ನು ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು ಮತ್ತು ಚನ್ನಗಿರಿ ತಾಲೂಕು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಗಿ, ಜೋಳ ಮತ್ತು ಮಾಲ್ಡಂಡಿ ಜೋಳ ಖರೀದಿಸಲಾಗುತ್ತದೆ.  ಪ್ರತಿ ರೈತರಿಂದ ರಾಗಿಯನ್ನು ಎಕರೆಗೆ 1 ಕ್ವಿಂಟಾಲ್ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು 4290 ರೂ. ನಂತೆ ಮತ್ತು ಬಿಳಿಜೋಳ ಉತ್ಪನ್ನವನ್ನು ಪ್ರತಿ ಎಕರೆಗೆ 10 ಕ್ವಿಂಟಾಲ್ನಂತೆ ಗರಿಷ್ಠ 150 ಕ್ವಿಂಟಾಲ್ ಬಿಳಿಜೋಳ, ಹೈಬ್ರೀಡ್ ಕ್ವಿಂಟಾಲ್ಗೆ 3371 ರೂ.ರಂತೆ ಹಾಗೂ ಬಿಳಿಜೋಳ ಮಾಲ್ದಂಡಿ ಜೋಳವನ್ನು ಕ್ವಿಂಟಾಲ್ಗೆ 3421 ರೂ.ಗಳಂತೆ ಎಫ್.ಎ.ಕ್ಯೂ ಗುಣಮಟ್ಟದ ಉತ್ಪನ್ನ ಖರೀದಿಸಲಾಗುವುದು.  ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದೆ. ರಾಗಿ ಖರೀದಿಗೆ ಈಗಾಗಲೇ ರೈತರಿಂದ ನೋಂದಣಿಯನ್ನು ಪ್ರಾರಂಭಿಸಲಾಗಿದ್ದು ಜ. 1 ರಿಂದ ಮಾರ್ಚ್ 31 ರ ವರೆಗೆ ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಮಾಡಲಾಗುತ್ತದೆ. ರೈತರು ಬೆಳೆ ನಮೂದಿನೊಂದಿಗೆ ಎಫ್‌ಐಡಿಯೊಂದಿಗೆ ನೋಂದಣಿ ಮಾಡಿಸಲು ತಿಳಿಸಿದ್ದಾರೆ.