ಜಿಲ್ಲೆ

ನಾಗರಿಕ ನೋಂದಣಿ ಸಮನ್ವಯ ಸಮಿತಿ ಸಭೆ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 916, ನಗರದಲ್ಲಿ 20 ಸೇರಿ 936 ನಾಗರಿಕ ಜನನ, ಮರಣ ನೋಂದಣಿ ಘಟಕಗಳಿದ್ದು, ಜಿಲ್ಲೆಯಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 15.30 ಜನನ ಹಾಗೂ 7.66 ಮರಣ ಪ್ರಮಾಣ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.  ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ನಾಗರಿಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು.  2024ರ ಜನವರಿಯಿಂದ ಜೂನ್‌ವರೆಗೆ 7367 ಗಂಡು, 6920 ಹೆಣ್ಣು ಹಾಗೂ 1 ತೃತೀಯ ಲಿಂಗಿ ಸೇರಿ 14288 ಜನನ ಮತ್ತು ಇದೇ ಅವಧಿಯಲ್ಲಿ 4541 ಗಂಡು, 3448 ಹೆಣ್ಣು ಹಾಗೂ 1 ತೃತೀಯ ಲಿಂಗಿ ಸೇರಿ 7990 ಮರಣ ಪ್ರಕರಣಗಳು ಸಂಭವಿಸಿವೆ.  2024ರ ಜನವರಿಯಿಂದ ಜೂನ್ ಅಂತ್ಯದವರೆಗೆ ತಡವಾಗಿ ನೋಂದಾಯಿಸಿದ ಜನನ ಪ್ರಕರಣಗಳಲ್ಲಿ 1565 ಗಂಡು, 1458 ಹೆಣ್ಣು ಸೇರಿ 3023, ಮರಣ ಪ್ರಕರಣಗಳಲ್ಲಿ 1781 ಗಂಡು, 1535 ಹೆಣ್ಣು ಸೇರಿ 3316 ನೊಂದಣಿ ಮಾಡಲಾಗಿದೆ ಎಂದು ಹೇಳಿದರು.  ಮಹಾನಗರ ಪಾಲಿಕೆ, ನಗರಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಸ್ಥಳೀಯ ಸಂಸ್ಥೆಗಳ ಆರೋಗ್ಯಾಧಿಕಾರಿಗಳು, ಪುರಸಭೆ ವ್ಯಾಪ್ತಿಯಲ್ಲಿ ಆರೋಗ್ಯ ನಿರೀಕ್ಷಕರು, ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಯ ವೈದ್ಯಾಧಿಕಾರಿಗಳು ಉಪ ನೋಂದಣಾಧಿಕಾರಿಯಾಗಿರುತ್ತಾರೆ. ನಗರ, ಪಟ್ಟಣ ಪ್ರದೇಶದಲ್ಲಿನ ಖಾಸಗಿ, ಸರ್ಕಾರಿ ಆಸ್ಪತ್ರೆಯಲ್ಲಿ ಜನನ, ಮರಣ ಪ್ರಕರಣಗಳಲ್ಲಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿ ಮಾಡಿ ದಾಖಲೆ ಸಂಬಂಧಿಸಿದ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು ಎಂದು ವಿವರಿಸಿದರು.  ಕೆಲವು ಆಸ್ಪತ್ರೆಗಳಲ್ಲಿ ಜನನ ಮತ್ತು ಮರಣ ಪ್ರಕರಣಗಳಲ್ಲಿ ಒಂದಕ್ಕೊಂದು ದಾಖಲೆ ತಾಳೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ನ್ಯಾಯಾಲಯದಲ್ಲಿ ಅನಾವಶ್ಯಕ ಪ್ರಕರಣಗಳು ದಾಖಲಾಗುತ್ತಿವೆ. ಹರಿಹರ ಸಾರ್ವಜನಿಕ ಆಸ್ಪತ್ರೆಯಲ್ಲಿನ ಜನನ ಮತ್ತು ಮರಣ ಅಂಕಿ ಅಂಶಗಳ ದಾಖಲೆ ಸರಿಯಾಗಿ ಸ್ಥಳೀಯ ಸಂಸ್ಥೆಗೆ ಸಲ್ಲಿಸದ ಕಾರಣ ಇ-ಜನ್ಮ ತಂತ್ರಾಂಶದಲ್ಲಿ ಹೆಸರಿದ್ದರೆ, ಅದರ ದಾಖಲೆ ಲಭ್ಯವಿಲ್ಲ ಮತ್ತು ಹೆಸರು ಮತ್ತು ಅವರ ಇತರೆ ದಾಖಲೆಗಳಿಗೆ ತಾಳೆಯಾಗದಿರುವುದರಿಂದ ತಿದ್ದುಪಡಿ ಮಾಡಲು ನ್ಯಾಯಾಲಯದಲ್ಲಿ ಆದೇಶ ಪಡೆಯಬೇಕಾಗುತ್ತದೆ ಎಂದರು.  ತಿದ್ದುಪಡಿ ಪ್ರಕರಣ ಹೆಚ್ಚಿರುವುದರಿಂದ ನಗರಸಭೆಯಿಂದ ನ್ಯಾಯಾಲಯದ ಪ್ರತಿನಿಧಿಯಾಗಿ ವಕೀಲರು ಹಾಜರಾಗುವುದರಿಂದ ಇವರಿಗೆ ಪ್ರಕರಣಗಳ ಆಧಾರದಲ್ಲಿ ಗೌರವಧನ ಪಾವತಿಸಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗೆ ಹೊರೆಯಾಗುವ ಜತೆಗೆ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಆಗುತ್ತಿರುವ ಸಮಸ್ಯೆ ಬಗ್ಗೆ ಸಭೆ ಗಮನಕ್ಕೆ ತಂದಾಗ, ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲು ತಿಳಿಸಿ ಎಲ್ಲ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲು ಜಿಲ್ಲಾಧಿಕಾರಿ ಸೂಚನೆ ನೀಡಿದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಉಪವಿಭಾಗಾಧಿಕಾರಿ ಅಭಿಷೇಕ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಎಸ್. ನೀಲಾ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.  ಬಾಕ್ಸ್..  30 ದಿನದೊಳಗೆ ಜನನ, ಮರಣ ಪತ್ರ  ಗ್ರಾಮಾಂತರ ಪ್ರದೇಶದಲ್ಲಿ ನಾಗರಿಕ ನೋಂದಣಿ ಪದ್ದತಿಯಡಿ ಜುಲೈ 1ರಿಂದ ಗ್ರಾಮ ಮಟ್ಟದಲ್ಲಿ ನೋಂದಣಾಧಿಕಾರಿಯಾಗಿ ಗ್ರಾಮ ಆಡಳಿತಾಧಿಕಾರಿ, ಗ್ರಾಪಂ ಕಾರ್ಯದರ್ಶಿ ಉಪ ನೋಂದಣಾಧಿಕಾರಿಯಾಗಿರುತ್ತಾರೆ. 30 ದಿನಗಳೊಳಗೆ ಜನನ, ಮರಣ ಪ್ರಕರಣಗಳ ನೋಂದಣಿ ಮಾಡಿ ಸಾರ್ವಜನಿಕರಿಗೆ ಪ್ರಮಾಣಪತ್ರ ನೀಡಲು ಅಧಿಕಾರ ನೀಡಲಾಗಿದೆ.