ಜಿಲ್ಲೆ

ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸನ್ನದ್ಧ

ರಮೇಶ ಜಹಗೀರದಾರ್

ದಾವಣಗೆರೆ : ಪ್ರಸ್ತುತ ಮುಂಗಾರಿನಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ನೂತನ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರವಾಹ ಉಂಟಾಗಬಹುದಾದ ಸೂಕ್ಷ್ಮ ಪ್ರದೇಶಗಳಲ್ಲಿ ಟಾಮ್ ಟಾಮ್ ಹೊಡೆಸುವುದು, ಸೆಲ್ಫಿ ಪಾಯಿಂಟ್‌ಗಳಲ್ಲಿ ಮುನ್ನೆಚ್ಚರಿಕೆ ಸೂಚನೆಯ ಬರಹಗಳನ್ನು ಬರೆಸುವುದು, ಪೊಲೀಸ್ ಸಿಬ್ಬಂದಿ ಆಗಾಗ ಅಲ್ಲಿಗೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
 ಅಪಾಯ ಸಂಭವಿಸಬಹುದಾದ ಸ್ಥಳಗಳಿಗೆ ಸಾರ್ವಜನಿಕರು ಹೋಗುವುದು, ಈಜುವುದು ಮಾಡಬಾರದು. ಈ ಸೂಚನೆಯನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಕೃತಿ ವಿಕೋಪದ ಸಂದರ್ಭಗಳನ್ನು ಎದುರಿಸಲು ಎಸ್‌ಡಿಆರ್‌ಎಫ್ ಪಡೆ ಸಿದ್ಧವಾಗಿದೆ ಎಂದು ಹೇಳಿದರು.
 ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಅತಿವೃಷ್ಟಿ ಅಥವಾ ಪ್ರವಾಹದಿಂದ ಸಾವು ಸಂಭವಿಸಿದರೆ ಮೃತರ ಕುಟುಂಬಗಳಿಗೆ 24 ಗಂಟೆಯೊಳಗೆ, ಮನೆ ಬಿದ್ದರೆ 48 ಗಂಟೆಯೊಳಗೆ ಪರಿಹಾರ ಒದಗಿಸಲಾಗುವುದು. ಗ್ರಾಮ ಪಂಚಾಯಿತಿ ಟಾಸ್ಕ್‌ಫೋರ್ಸ್‌ಗಳನ್ನು ಚುರುಕುಗೊಳಿಸಲಾಗುವುದು ಎಂದು ತಿಳಿಸಿದರು.
 ಮಳೆಯಿಂದ 51 ಅಂಗನವಾಡಿ, 81 ಶಾಲೆ, 2 ಪ್ರಥಮಿಕ ಆರೋಗ್ಯ ಕೇಂದ್ರಗಳು ಸೋರುತ್ತಿದ್ದು ದುರಸ್ತಿ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
 ಆರಂಭದಲ್ಲಿ ಕೊರತೆಯಾದರೂ ಜುಲೈನಲ್ಲಿ ಪರಿಸ್ಥಿತಿ ಸುಧಾರಿಸಿದ್ದು ಜೂನ್ 1ರಿಂದ ಇಲ್ಲಿಯ ವರೆಗೆ ಶೇ. 22ರಷ್ಟು ಜಾಸ್ತಿ ಮಳೆಯಾಗಿದೆ. 2.45 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು ಇದುವರೆಗೆ ಶೇ. 55ಕ್ಕೂ ಹೆಚ್ಚು ಬಿತ್ತನೆಯಾಗಿದೆ. ಬಿತ್ತನೆ ಬೀಜ, ಗೊಬ್ಬರ ದಾಸ್ತಾನು ಸಮರ್ಪಕವಾಗಿದೆ ಎಂದು ತಿಳಿಸಿದರು.
 ಗೃಹಲಕ್ಷ್ಮೀ ಯೋಜನೆಗೆ ಗ್ರಾಮೀಣ ಪ್ರದೇಶಗಳಲ್ಲಿ ಶೇ. 75-80ರಷ್ಟು ನೋಂದಣಿ ಆಗಿದೆ. ನಗರ ಪ್ರದೇಶದಲ್ಲಿ ಚುರುಕಾಗಬೇಕಿದೆ. ಜಿಲ್ಲೆಯಲ್ಲಿ 4.50 ಲಕ್ಷ ಮಹಿಳೆಯರಿದ್ದು ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಸಮರೋಪಾದಿಯಲ್ಲಿ ನೋಂದಣಿ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
 ಸರ್ಕಾರಿ ಜಾಗಗಳನ್ನು ಗುರುತಿಸಿ ಆದ್ಯತೆಯ ಮೇಲೆ ಶಾಲೆ, ಆಸ್ಪತ್ರೆ, ಅಂಗನವಾಡಿಗಳಿಗೆ ಒದಗಿಸಲಾಗುವುದು. ಪ್ರತಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನಿಗದಿ ಮಾಡಲಾಗುವುದು. ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಕೆರೆ, ಜಮೀನು, ಅರಣ್ಯ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
 ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜನಪರವಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಕೆಲಸ ವಿಳಂಬ ಮಾಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ವಿಚಾರದಲ್ಲಿ ತಾಲೂಕುಗಳ ಸಾಧನೆಯನ್ನು ಗಮನಿಸಿ ಉತ್ತಮ ಅಧಿಕಾರಿಗಳಿಗೆ ಪ್ರಶಂಸೆ, ನಿರ್ಲಕ್ಷೃ ತೋರಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
 ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.
 ...
 (ಬಾಕ್ಸ್)
 ಪರಿಸ್ಥಿತಿ ಅವಲೋಕಿಸಿ ಭದ್ರಾ ನಾಲೆಗೆ ನೀರು
 ಭದ್ರಾ ಜಲಾಶಯದಲ್ಲಿ ಶುಕ್ರವಾರ ನೀರಿನ ಮಟ್ಟ 159 ಅಡಿ ಇದ್ದು 163 ಅಡಿ ತಲುಪಿದರೆ ನಾಲೆಗಳಿಗೆ ನೀರು ಹರಿಸುವ ಸಾಧ್ಯತೆಯಿದೆ ಎಂದು ಡಿಸಿ ವೆಂಕಟೇಶ್ ತಿಳಿಸಿದರು.
 ಜಿಲ್ಲೆಯ ರೈತರು ಭದ್ರಾ ನೀರಿನ ನಿರೀಕ್ಷೆಯಲ್ಲಿದ್ದಾರೆ. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮುಂದುವರಿದು ಒಳ ಹರಿವು ಇನ್ನಷ್ಟು ಹೆಚ್ಚಾದರೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ನಡೆಸಿ ನೀರು ಬಿಡುವ ಕುರಿತು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
 ...
 (ಬಾಕ್ಸ್)
 ತಪ್ಪಿದ ಅನಾಹುತ
 ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಗುರುವಾರ ಮನೆಯ ಗೋಡೆ ಕುಸಿದು ಬಿದ್ದಿದ್ದು ಆ ಕುಟುಂಬದ 5 ಜನ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
 ಕಟ್ಟಡ ನಡುಗಿದ ಅನುಭವ ಆಗಿದ್ದರಿಂದ ಎಚ್ಚೆತ್ತ ಮನೆಯವರು ಹೊರಗೆ ಓಡಿ ಬಂದಿದ್ದಾರೆ. ಕೆಲ ಹೊತ್ತಿನಲ್ಲೇ ಗೋಡೆ ಕುಸಿದು ಬಿದ್ದಿದೆ. ಆ ಸ್ಥಳಕ್ಕೆ ಶುಕ್ರವಾರ ತಾವು ಭೇಟಿ ನೀಡಿ ಬಂದಿದ್ದು ಆ ಮನೆಯವರಿಗೆ 1.25 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.
 ...