ಜಿಲ್ಲೆ

ದಾಸೋಹ ಸಂಸ್ಕೃತಿಯಿಂದ ದೈವಾನುಗ್ರಹ ಪ್ರಾಪ್ತಿ

ರಮೇಶ ಜಹಗೀರದಾರ್

ದಾವಣಗೆರೆ :  ಹಸಿದವರ ದಾಹ ತಣಿಸುವವರಿಗೆ ದೈವಾನುಗ್ರಹ ಪ್ರಾಪ್ತಿಯಾಗಲಿದೆ. ಅದಕ್ಕಾಗಿಯೇ ದಾಸೋಹ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.  ನಗರದ ಹಳೇಪೇಟೆಯಲ್ಲಿ ಚಿಂದೋಡಿ ಮನೆತನದಿಂದ ಗುರುವಾರ ಹಮ್ಮಿಕೊಂಡಿದ್ದ ಜಂಗಮ ದಾಸೋಹ ಸೇವೆಯ ಶತಮಾನೋತ್ಸವ ಸಂಭ್ರಮದಲ್ಲಿ ಚಿಂದೋಡಿ ವಂಶಸ್ಥರ ಹಿರಿಯರ ಭಾವಚಿತ್ರಕ್ಕೆ ಪುಷ್ಪನಮನ ಸಮರ್ಪಿಸಿದ ನಂತರ ಮಾತನಾಡಿದರು.  ದಾಸೋಹ ನಡೆಸುವುದು ಸುಲಭದ ಮಾತಲ್ಲ. ಅದೊಂದು ರೀತಿ ಸಾಹಸಮಯ ಕಾರ್ಯ. ಶತಮಾನಗಳಿಂದ ಚಿಂದೋಡಿ ಮನೆತನ ಶ್ರಾವಣ ಮಾಸದಲ್ಲಿ 1 ತಿಂಗಳು ಜಂಗಮ ದಾಸೋಹ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಬಸವಾದಿ ಶರಣರ ಕಾಯಕ ಮತ್ತು ದಾಸೋಹ ಪರಂಪರೆ  ಅತ್ಯಮೂಲ್ಯ ತತ್ವಗಳಾಗಿವೆ. ಈ ಆದರ್ಶವನ್ನು ಅನೇಕ ಮಠಗಳು ಮುಂದುವರಿಸಿವೆ. ಅದೇ ರೀತಿ 1924ರಲ್ಲಿ ಚಿಂದೋಡಿ ಶಾಂತವೀರಪ್ಪ, ಶಾಂತವೀರಮ್ಮ ಜಂಗಮ ದಾಸೋಹ ಆರಂಭಿಸಿ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.  ಅವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಚಿಂದೋಡಿ ಮನೆತನ ಕಲಾರಾಧನೆ ಮೂಲಕ ಆ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದೆ. ಅನೇಕ ಕಲಾವಿದರ ಕುಟುಂಬಕ್ಕೆ ಬದುಕು ಕಟ್ಟಿಕೊಟ್ಟಿದೆ. ನಾಟಕ ಕಂಪನಿಗಳಿಂದ ವಿವಿಧ ಜಾತ್ರೆಗಳಲ್ಲಿ ಪ್ರದರ್ಶನಗಳು ನಡೆಯುತ್ತಿವೆ ಎಂದರು.  ಉಕ್ಕಡಗಾತ್ರಿ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿ ಸುರೇಶ್ ಮಾತನಾಡಿ, ಮನೆತನಗಳು ದಾಸೋಹ ಕಾರ್ಯ ನಡೆಸುವುದು ವಿರಳ. ಆದರೆ, ಈ ಚಿಂದೋಡಿ ಮನೆತನ ದಾಸೋಹದ ಜತೆಗೆ ವೃತ್ತಿರಂಗಕ್ಕೆ ತನ್ನದೆ ಕೊಡುಗೆ ನೀಡುತ್ತಾ ಬಂದಿದೆ ಎಂದು ಹೇಳಿದರು.  ಆಂಧ್ರಪ್ರದೇಶದ ಉರುಗಾದ್ರಿ ಸಂಸ್ಥಾನ ಮಠದ ಶ್ರೀ ಕರಿಬಸವ ರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂದೋಡಿ ಕುಟುಂಬಸ್ಥರಾದ ಎಸ್. ವೀರಣ್ಣ, ಬಂಗಾರೇಶ್, ಪಾರ್ವತಮ್ಮ, ಶಂಭುಲಿಂಗಪ್ಪ, ರಾಜಶೇಖರ್, ತ್ರಿವೇಣಿ, ವೀರಶಂಕರ, ವೀರೇಶ್, ರಾಜಣ್ಣ, ಮಧುಕೇಶ್ ಇತರರಿದ್ದರು.