ದಾವಣಗೆರೆ : ನಗರದಲ್ಲಿ ಶನಿವಾರ ಆರಂಭವಾದ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನದಲ್ಲಿ ವಿವಿಧ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನರಂಜಿಸಿದವು.
ಬಸವ ಕಲಾ ಲೋಕದ ಕಲಾವಿದರು ವಚನ ಗಾಯನ ನಡೆಸಿಕೊಟ್ಟರು. ಅನುಶ್ರೀ ಸಂಗೀತ ಶಾಲೆಯ ತಂಡದವರು ಸುವರ್ಣ ಕರ್ನಾಟಕ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ತಪಸ್ಯಾ ವಾಸವಿ ನೃತ್ಯಾಲಯ ವಿದ್ಯಾರ್ಥಿಗಳು ಪುಷ್ಪಾಂಜಲಿ ನೃತ್ಯ ಮಾಡಿದರು.
ಆನಂದ ಆರ್. ಪಾಟೀಲ್ ಸುಗಮ ಸಂಗೀತ ನಡೆಸಿಕೊಟ್ಟರು. ಸಾಗರದ ಶಾಂತಾ ಮತ್ತು ತಂಡದವರ ಡೊಳ್ಳು ಕುಣಿತ, ಇಪ್ಟಾ ಕಲಾವಿದರ ಕ್ರಾಂತಿ ಗೀತೆಗಳು, ರುದ್ರಾಕ್ಷಿಬಾಯಿ ಅವರ ಸಂಗೀತ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಸಂಜೆ ಕದಳಿ ವೇದಿಕೆಯ ತಂಡದ ಸಮೂಹ ಗಾಯನ ಆಕರ್ಷಕವಾಗಿತ್ತು. ನಮನ ಅಕಾಡೆಮಿಯ ವಿದ್ಯಾರ್ಥಿಗಳು ಪ್ರತಿಭೆ ಮೆರೆದರು. ನೃತ್ಯ ವಿದ್ಯಾಲಯದ ರಕ್ಷಾ ರಾಜಶೇಖರ್ ತಂಡದವರು ಜಾನಪದ ನೃತ್ಯದ ಮೂಲಕ ವೇದಿಕೆ ರಂಗೇರುವಂತೆ ಮಾಡಿದರು.
ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಬಂದ ಪತ್ರಕರ್ತರಲ್ಲಿ ಕೆಲವರು ಸ್ವಯಂ ಪ್ರೇರಿತವಾಗಿ ವೇದಿಕೆಗೆ ಬಂದು ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು.