ಜಿಲ್ಲೆ

ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಆಗ್ರಹ

ರಮೇಶ ಜಹಗೀರದಾರ್

ದಾವಣಗೆರೆ  : ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ, ಕಾನೂನು ಬಾಹಿರ ಕ್ರಷರ್ ಸ್ಥಗಿತಗೊಳಿಸಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ. ವಿನಯ್ ಕುಮಾರ್ ಆಗ್ರಹಿಸಿದರು.  ಕಲ್ಲು ಕ್ವಾರಿಗಳಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಉಪ ವಿಭಾಗಾಧಿಕಾರಿ ಅಭಿಷೇಕ್, ರಶ್ಮಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಬುಧವಾರ ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ವಿನಯ್ ಕುಮಾರ್ ಮಾತನಾಡಿದರು.  ನಾನು ಹಲವು ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿ ಬರುತ್ತಿರುವ ಧೂಳು ಹೆಚ್ಚಾಗಿದೆ. ಮಕ್ಕಳು ಈ ವಾತಾವರಣದಲ್ಲಿ ಪಾಠ ಕಲಿಯಲು ಆಗದು. ಯಾವುದೇ ರಸ್ತೆಯಾದರೂ 100 ಮೀಟರ್ ಆಚೆ ಇರಬೇಕು. ಸೇಫ್ ಜೋನ್ 500 ಮೀಟರ್ ದೂರದ ವರೆಗೆ ಇರಬೇಕು ಎಂದು ತಿಳಿಸಿದರು.  ಕೆಂಚಿಕೊಪ್ಪ ಗ್ರಾಮ ಪಂಚಾಯಿತಿಯ ಆರುಂಡಿ ಗ್ರಾಮದ ವ್ಯಾಪ್ತಿಯಲ್ಲಿನ ಕಲ್ಲಿನ ಕ್ವಾರಿ ಕ್ರಷರ್ ಹಾಗೂ ಗಣಿಗಾರಿಕೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದು, ಗ್ರಾಮದ ರಸ್ತೆ ಹಾಳಾಗಿದೆ. ಧೂಳಿನಿಂದ ಗ್ರಾಮಸ್ಥರಿಗೆ ಅನಾನುಕೂಲವಾಗಿದೆ. ರೈತರು ಬೆಳೆದ ಬೆಳೆಗಳು ಹಾಳಾಗಿವೆ. ನೀರು ಕುಡಿಯಲು ಯೋಗ್ಯವಿಲ್ಲದಂತಾಗಿದೆ. ಅಂತರ್ಜಲ ಮಟ್ಟವೂ ಕುಸಿದಿದೆ. ವಾಸದ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎಂದು ವಿವರಿಸಿದರು.  ಗ್ರಾಮದಲ್ಲಿ ನಡೆಸುತ್ತಿರುವ ಪ್ರತಿಯೊಂದು ಕ್ವಾರಿಗಳಿಗೆ ತಡೆಗೋಡೆ ಇಲ್ಲ. ಮರ ಗಿಡಗಳನ್ನು ಬೆಳೆಸಿಲ್ಲ. ತಂತಿ ಬೇಲಿ ಹಾಕುವುದೂ ಸೇರಿ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಊರಿಗೆ ಹತ್ತಿರವಾಗಿ ಕ್ರಷರ್, ಗಣಿಗಾರಿಕೆ ನಡೆಯುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ ಎಂದು ತಿಳಿಸಿದರು.  ಕಲ್ಲುಗಳನ್ನು ಪುಡಿ ಮಾಡಲು ಬಳಸುವ ಸ್ಫೋಟಕಗಳಿಂದ ಗ್ರಾಮದ ಶಾಲಾ ಮಕ್ಕಳ ಶ್ರವಣ ಶಕ್ತಿ ಕುಂದಿದೆ. ಧೂಳಿನಿಂದ ಉಸಿರಾಟದ ತೊಂದರೆಯೂ ಆಗುತ್ತಿದೆ. ಅನೇಕ ಕಾಯಿಲೆಗಳು, ಚರ್ಮ ರೋಗಗಳು ಬಾಧಿಸುತ್ತಿವೆ. ಪಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.  ಆರುಂಡಿ ಗ್ರಾಮ ಕೃಷಿ ಅವಲಂಬಿತ ಪ್ರದೇಶ. ಇಲ್ಲಿರುವ ಕ್ವಾರಿಗಳಿಂದ ಬರುತ್ತಿರುವ ಧೂಳಿನ ಕಣಗಳು ಬೆಳಗಳ ಮೇಲೆ ಬಿದ್ದು ಫಸಲು ಕೈಗೆ ಬರದಂಥ ಸ್ಥಿತಿ ನಿರ್ಮಾಣವಾಗಿದೆ. ಪಶು ಸಂಗೋಪನೆಯ ಮೇಲೂ ನೇರ ಪರಿಣಾಮ ಬೀರಿದೆ ಎಂದು ಆತಂಕ ವ್ಯಕ್ತಪಡಿಸಿದರು.