ಜಿಲ್ಲೆ

ಕಳವಾಗಿದ್ದ ಚಿನ್ನದ ಸರ ಕೆಲವೇ ಗಂಟೆಗಳಲ್ಲಿ ಪತ್ತೆ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ಮನೆಯೊಂದರಲ್ಲಿ ಕಳ್ಳತನವಾಗಿದ್ದ 20 ಗ್ರಾಂ. ಬಂಗಾರದ ಸರವನ್ನು ಗಾಂಧಿನಗರ ಠಾಣೆಯ ಪೊಲೀಸರು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ್ದಾರೆ.  ದಾವಲ್ ಪೇಟೆಯ ನಿವೃತ್ತ ಶಿಕ್ಷಕಿ ಬಿ. ಜಯಮ್ಮ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಕುರಿತು ಜಯಮ್ಮ ಅವರು ಶುಕ್ರವಾರ ಗಾಂಧಿನಗರ ಠಾಣೆಗೆ ದೂರು ನೀಡಿದ್ದರು.  ತನಿಖೆ ಕೈಗೆತ್ತಿಕೊಂಡ ಅಪರಾಧ ವಿಭಾಗದ ಉಪ ನಿರೀಕ್ಷಕಿ ಲಲಿತಮ್ಮ ಹಾಗೂ ಸಿಬ್ಬಂದಿ ಮಹೇಶ ಕುಮಾರ ಅವರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದರು.  ಜಯಮ್ಮ ಅವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಲಕ್ಷ್ಮಿಯನ್ನು ವಿಚಾರಣೆ ಮಾಡಿದಾಗ ಆಕೆಯು ಒಪ್ಪಿಕೊಂಡಿದ್ದು, ಕದ್ದ 2.50 ಲಕ್ಷ ಮೌಲ್ಯದ 20 ಗ್ರಾಂ ಬಂಗಾರದ ಸರವನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ನಂತರ ಆ ಸರವನ್ನು ಜಯಮ್ಮ ಅವರಿಗೆ ಹಸ್ತಾಂತರಿಸಲಾಯಿತು.