ಜಿಲ್ಲೆ

ನಕಲಿ ಚಿನ್ನ ನೀಡಿ ವಂಚಿಸಿದ್ದ ಆರೋಪಿಗಳ ಬಂಧನ

ರಮೇಶ ಜಹಗೀರದಾರ್

ದಾವಣಗೆರೆ : ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 8 ಲಕ್ಷ ರೂ. ದೋಚಿ ಪರಾರಿಯಾಗಿದ್ದ ಆರೋಪಿಗಳಲ್ಲಿ ಇಬ್ಬರನ್ನು ಜಗಳೂರು ಠಾಣೆಯ ಪೊಲೀಸರು ಬಂಧಿಸಿ, 7.5 ಲಕ್ಷ ನಗದು ಹಾಗೂ 2 ಗ್ರಾಂ ಅಸಲಿ ಮತ್ತು 505 ಗ್ರಾಂ ನಕಲಿ ಚಿನ್ನದ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.  ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಬಟ್ಟನಳ್ಳಿ ಗ್ರಾಮದ ಪ್ರಕಾಶ್ ಹಾಗೂ ಮಾರಪ್ಪ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ಸುರೇಶ್‌ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ತೆಲಂಗಾಣದ ನಾಲಗೊಂಡಾ ಜಿಲ್ಲೆಯ ಚಳಕುರ್ತಿ ತಾಂಡಾದ ರಮಾವತ್ ಭಾಸ್ಕರ್ ವಂಚನೆಗೆ ಒಳಗಾದವರು.  ವಿಜಯನಗರ ಜಿಲ್ಲೆಯ ಹಂಪಿಯ ಸುರೇಶ್ ಲಾರಿ ಚಾಲಕನಾಗಿದ್ದು, 2021ರಲ್ಲಿ ಚಳಕುರ್ತಿ ತಾಂಡಾಗೆ ಭೇಟಿ ನೀಡಿದ್ದನು. ಈ ವೇಳೆ ರಮಾವತ್ ಭಾಸ್ಕರ್ ಪರಿಚಯವಾಗಿತ್ತು. ಆಗ ಪರಸ್ಪರ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ಏ. 9ರಂದು ರಮಾವತ್ ಅವರಿಗೆ ದೂರವಾಣಿ ಕರೆ ಮಾಡಿದ ಸುರೇಶ್, ಚಿನ್ನದ ನಾಣ್ಯ ಸಿಕ್ಕಿರುವ ವಿಚಾರ ಹಂಚಿಕೊಂಡಿದ್ದನು.  ಇದನ್ನು ನಂಬಿದ ರಮಾವತ್ 8 ಲಕ್ಷದೊಂದಿಗೆ ಅರ್ಧ ಕೆ.ಜಿ. ಚಿನ್ನದ ನಾಣ್ಯ ಖರೀದಿಸಲು ಬಳ್ಳಾರಿಗೆ ಬಂದಿದ್ದರು.  ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಬಳಿಗೆ ಬರಲು ಸೂಚಿಸಿದ್ದ ಆರೋಪಿಗಳು ನಕಲಿ ಚಿನ್ನದ ನಾಣ್ಯಗಳನ್ನು ನೀಡಿ 8 ಲಕ್ಷ ಹಣ ಪಡೆದು ಪರಾರಿಯಾಗಿದ್ದರು. ಈ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸ್ ಇನ್‌ಸ್ಪೆಕ್ಟರ್ ಸಿದ್ರಾಮಯ್ಯ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಮಾಡಿದೆ.