ಜಿಲ್ಲೆ

ಕಳ್ಳತನ ಆರೋಪಿಗಳ ಬಂಧನ

ರಮೇಶ ಜಹಗೀರದಾರ್

ದಾವಣಗೆರೆ :  ಮನೆ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಬಾಲಕರು ಸೇರಿ ಮೂವರನ್ನು ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.  ನಗರದ ನಿವಾಸಿ ಆಸೀಫ್ ಖಾನ್ ಹಾಗೂ ಇಬ್ಬರು ಬಾಲಕರು ಬಂಧಿತರು. ಇವರಿಂದ 60 ಸಾವಿರ ನಗದು ಹಾಗೂ 1.6 ಲಕ್ಷ ಮೌಲ್ಯದ 6 ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.  ದಾವಣಗೆರೆ ತಾಲೂಕಿನ ದೇವರಹಟ್ಟಿ ಗ್ರಾಮದ ಮಲ್ಲಿಕ್ ರಿಹಾನ್ ಎಂಬುವರ ಮನೆಯಲ್ಲಿ ಜೂ. 21ರಂದು ಕಳ್ಳತನ ನಡೆದಿತ್ತು. ರಾತ್ರಿ ವೇಳೆ ಮನೆಗೆ ನುಗ್ಗಿ 60 ಸಾವಿರ ರೂ. ಕಳವು ಮಾಡಿದ್ದ ಕುರಿತು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಕಿರಣ್‌ಕುಮಾರ್ ನೇತೃತ್ವದ ತಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.  ಇವರ ಬಂಧನದಿಂದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ 3 ದ್ವಿಚಕ್ರ ವಾಹನ ಕಳವು, ಗ್ರಾಮಾಂತರ ಠಾಣೆ, ಗಾಂಧಿನಗರ ಹಾಗೂ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಲಾ 1 ಪ್ರಕರಣ ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.