ಜಿಲ್ಲೆ

ಐವರು ಆರೋಪಿಗಳ ಬಂಧನ

ರಮೇಶ ಜಹಗೀರದಾರ್

ದಾವಣಗೆರೆ  : ನ್ಯಾಮತಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಬ್ಯಾಂಕ್ ದರೋಡೆ ಪ್ರಕರಣದ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.  ವಿಜಯ ಕುಮಾರ್, ಅಜಯ ಕುಮಾರ್, ಅಭಿಷೇಕ್, ಮಂಜುನಾಥ್ ಮತ್ತು ಚಂದ್ರು ಬಂಧಿತರು. ಅವರಿಂದ 220 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಪರಮಾನಂದನನ್ನು ಬಂಧಿಸಬೇಕಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.  ವಿಜಯ ಕುಮಾರ್, ಅಜಯ ಕುಮಾರ್ ಮತ್ತು ಪರಮಾನಂದ ತಮಿಳುನಾಡಿನವರು. ಉಳಿದವರು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನವರು. ನ್ಯಾಮತಿ ಭಾಗದಲ್ಲಿ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದರು.  ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಉಳಿದ ಚಿನ್ನ ಎಲ್ಲಿದೆ ಎಂಬುದನ್ನು ತನಿಖೆಯಿಂದ ತಿಳಿಯಬೇಕಿದೆ ಎಂದು ಹೇಳಿದರು.