ಜಿಲ್ಲೆ

ಕಲುಷಿತ ರಾಜಕೀಯ ವ್ಯವಸ್ಥೆಯ ಶುದ್ಧೀಕರಣ ಅವಶ್ಯಕ

ರಮೇಶ ಜಹಗೀರದಾರ್

ದಾವಣಗೆರೆ : ಪ್ರಸಕ್ತ ದಿನಗಳಲ್ಲಿ ದೇಶದ ರಾಜಕೀಯ ವ್ಯವಸ್ಥೆ ಸಂಪೂರ್ಣ ಕಲುಷಿತಗೊಂಡಿದ್ದು, ಇದರ ಶುದ್ಧೀಕರಣಕ್ಕೆ ಸಂಕಲ್ಪ ಮಾಡಬೇಕು ಎಂದು ಸಿಪಿಐ ರಾಜ್ಯ ಸಹ ಕಾರ್ಯದರ್ಶಿ ಅಮ್ಜದ್ ಹೇಳಿದರು.  ಭಾರತ್ ಕಮ್ಯುನಿಸ್ಟ್ ಪಕ್ಷ ಹಾಗೂ ಎಐಟಿಯುಸಿ ಜಿಲ್ಲಾ ಮಂಡಳಿ ಸಹಯೋಗದಲ್ಲಿ ಭಾನುವಾರ ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಕಾರ್ಮಿಕ ಮುಖಂಡ ದಿ. ಆನಂದ್‌ರಾಜ್ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.  ಭ್ರಷ್ಟಾಚಾರ, ಮತಧರ್ಮದ ನಶೆ ಹಾಗೂ ಜಾತೀಯತೆಯ ವಿಷ ರಾಜಕೀಯ ವ್ಯವಸ್ಥೆಯನ್ನು ಮಲಿನಗೊಳಿಸಿದ್ದು, ವೈಚಾರಿಕ ಬದ್ಧತೆಯಿರುವ, ಸಾಮಾಜಿಕ ಶಿಸ್ತು ಕಾಪಾಡುವ ಹಾಗೂ ಉತ್ತಮ ಗುರಿ ತಲುಪಲು ಪ್ರೇರಣೆ ನೀಡುವ ನಾಯಕತ್ವದ ಅಗತ್ಯವಿದೆ ಎಂದರು.  ದೇಶ ಇಂದಿಗೂ ಹಸಿವು, ಅನಕ್ಷರತೆ, ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಪರಿಪೂರ್ಣ ಶಿಕ್ಷಣ, ಉದ್ಯೋಗ ಒದಗಿಸಲಾಗದ ಸ್ಥಿತಿ ನಿರ್ಮಾಣಗೊಂಡಿದೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಔದ್ಯೋಗಿಕ ಸಮಸ್ಯೆಯಿಂದ ಹತಾಶರಾದ ಯುವಜನರು ದಿಕ್ಕುತಪ್ಪುತ್ತಿದ್ದಾರೆ ಎಂದರು.  ಆನಂದ್‌ರಾಜ್ ಅವರು ಸಂಘಟನಾತ್ಮಕ ಹಾಗೂ ಸೈದ್ಧಾಂತಿಕವಾಗಿ ಅತ್ಯಂತ ಬದ್ಧತೆ ಹೊಂದಿದವರಾಗಿದ್ದರು. ಕಮ್ಯುನಿಸ್ಟ್ ಚಳವಳಿಯಲ್ಲಿ ಒಂದು ಐತಿಹಾಸಿಕ ಮೈಲುಗಲ್ಲು ನಿರ್ಮಿಸಲು ಕಾರಣರಾದ ನಾಯಕರ ಸಾಲಿನಲ್ಲಿ ಆನಂದ್‌ರಾಜ್ ಅವರು ಒಬ್ಬರಾಗಿದ್ದಾರೆ ಎಂದು ಸ್ಮರಿಸಿದರು.  ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್ ಮಾತನಾಡಿ, ಆನಂದ್‌ರಾಜ್ ಯಾವ ದೊಡ್ಡ ಅಧಿಕಾರ ಹಿಡಿದವರಲ್ಲ. ಆದರೆ, ಕಮ್ಯುನಿಸಂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬಾಳಿ ಬದುಕಿದರು. ಲೆಕ್ಕಪತ್ರಗಳ ವಿಚಾರದಲ್ಲಿ ಅತ್ಯಂತ ಕಟುವಾಗಿದ್ದರು ಎಂದು ತಿಳಿಸಿದರು.  ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಆವರಗೆರೆ ಚಂದ್ರು ಅಧ್ಯಕ್ಷತೆ ವಹಿಸಿದ್ದರು. ಸಹ ಕಾರ್ಯದರ್ಶಿಗಳಾದ ಎಚ್.ಜಿ.ಉಮೇಶ್, ಆವರಗೆರೆ ವಾಸು, ಖಜಾಂಚಿ ಮಹಮ್ಮದ್ ರಫೀಕ್, ಕಲ್ಯಾಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್.ನಾಗರಾಜ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಎನ್‌ಎಫ್‌ಡಬ್ಲುೃ ಅಧ್ಯಕ್ಷೆ ಎ.ಬಿ.ಶಾರದಮ್ಮ, ಎಚ್.ಕೆ.ಕೊಟ್ರಪ್ಪ, ಗುಡಿಹಳ್ಳಿ ಹಾಲೇಶ್ ಇತರರು ಇದ್ದರು.  ಇಪ್ಟಾ ಕಲಾವಿದ ಶ್ಯಾಗಲೆ ಶರಣಪ್ಪ ಮತ್ತು ಗೆಳೆಯರು ಜಾಗೃತಿ ಗೀತೆ ಹಾಡಿದರು. ಸಿ.ರಮೇಶ್ ಸ್ವಾಗತಿಸಿದರು, ಕೆ.ಬಾನಪ್ಪ ನಿರೂಪಿಸಿದರು. ನರೇಗಾ ರಂಗನಾಥ್ ವಂದಿಸಿದರು.