ಜಿಲ್ಲೆ

ನಿರ್ಮಾಣವಾಗಲಿ ದೌರ್ಜನ್ಯಮುಕ್ತ ಸಮಾಜ

ರಮೇಶ ಜಹಗೀರದಾರ್

ದಾವಣಗೆರೆ  : ಮಹಿಳಾ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿ ಸುಂದರ ಸಮಾಜ ನಿರ್ಮಾಣವಾಗಲಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಆಶಯ ವ್ಯಕ್ತಪಡಿಸಿದರು.  ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಹಿಂದಿನ ದಿನಗಳಿಗೆ ಹೋಲಿಸಿದರೆ ಮಹಿಳಾ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿವೆ. ಸಂಪೂರ್ಣ ದೌರ್ಜನ್ಯಮುಕ್ತ ವಾತಾವರಣ ನಿರ್ಮಾಣವಾಗಬೇಕು. ಹಕ್ಕುಗಳ ಅರಿವು ಮೂಡಬೇಕು, ಕಾನೂನನ್ನು ಗೌರವಿಸಬೇಕು ಎಂದು ತಿಳಿಸಿದರು.  ನಮ್ಮದು ಪಿತೃಪ್ರಧಾನ ಸಮಾಜವಾಗಿದ್ದು ಹಲವು ವರ್ಷಗಳ ಹೋರಾಟದ ಫಲವಾಗಿ ಸಮಾನತೆ ಮೂಡಿದೆ. ಇದಕ್ಕೆ ಪುರುಷರೂ ಕೈಜೋಡಿಸಿದ್ದಾರೆ. ಪರಿಣಾಮವಾಗಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಬೆಳೆದಿದ್ದಾರೆ ಎಂದರು.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಪೊಲೀಸ್ ಮತ್ತು ನ್ಯಾಯಾಂಗ ಇಲಾಖೆಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಎರಡೂ ಇಲಾಖೆಗಳು ಸೇರಿ ಮಹಿಳೆ ಮತ್ತು ಮಕ್ಕಳ ಪ್ರಕರಣಗಳಲ್ಲಿ ನ್ಯಾಯ ಕೊಡಿಸೋಣ ಎಂದರು.  ಮಹಿಳೆಯರು ವೈಯಕ್ತಿಕ ಮತ್ತು ವೃತ್ತಿ ಬದುಕಿನಲ್ಲಿ ಸಮತೋಲನ ಸಾಧಿಸಬೇಕು. ಸವಾಲುಗಳನ್ನು ಎದುರಿಸಿ ಬಲಿಷ್ಠರಾಗಬೇಕು. ಅಹಂನಿಂದ ಹೊರ ಬಂದು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.  ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಶಿವಪ್ಪ ಜಿ. ಸಲಗರೆ ಮಾತನಾಡಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಮಹಿಳೆಯರಿಗೆ ಸಮಾನತೆ ಸಿಕ್ಕಿದೆ. ಮನೆಯ 4 ಗೋಡೆಗಳಿಂದ ಹೊರ ಬಂದಿದ್ದಾರೆ. ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರವೂ ಅನೇಕ ಸೌಲಭ್ಯಗಳನ್ನು ನೀಡಿದೆ ಎಂದು ತಿಳಿಸಿದರು.  ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಶ್ರೀರಾಮ ನಾರಾಯಣ ಹೆಗಡೆ, ಆರ್.ಎನ್. ಪ್ರವೀಣ್ ಕುಮಾರ್, ಮಹಾವೀರ ಮ.ಕರೆಣ್ಣವರ, ಎಚ್.ಡಿ. ಗಾಯತ್ರಿ, ನಾಜಿಯಾ ಕೌಸರ್, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಇದ್ದರು.