ಜಿಲ್ಲೆ

ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವುದು ಅಗತ್ಯ

ರಮೇಶ ಜಹಗೀರದಾರ್

ದಾವಣಗೆರೆ :  ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಅವಶ್ಯಕತೆ ಇದೆ ಎಂದು ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದರು.  ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಅಮೃತ ವಿದ್ಯಾಲಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ, ಬಾಲ್ಯ ವಿವಾಹ ತಡೆಯುವ ಮತ್ತು ಪೋಕ್ಸೋ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.  ಮಕ್ಕಳು ಮೊಬೈಲ್ನಲ್ಲಿ ಅನವಶ್ಯಕ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಪಾಲಕರು ಇದರ ಬಗ್ಗೆ ಗಮನ ಹರಿಸಬೇಕು. ಇಲಾಖೆಗಳ ಜತೆಗೆ ಮಕ್ಕಳು, ಪಾಲಕರು ಮತ್ತು ಸಾರ್ವಜನಿಕರು ಕೈಜೋಡಿಸಿದಾಗ ಮಾತ್ರ ಕಾನೂನಿನ ಅನುಷ್ಠಾನ ಸುಲಭ ಎಂದು ತಿಳಿಸಿದರು.  ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಣ್ಣಯ್ಯನವರ್ ಮಾತನಾಡಿ, ಮಕ್ಕಳ ಕುರಿತಾದ ಕಾನೂನು ತಿಳಿಯುವುದು ಎಲ್ಲರ ಜವಾಬ್ದಾರಿಯಾಗಿದೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ಅವರ ಬಗ್ಗೆ ಕಾಳಜಿ ವಹಿಸಬೇಕು. ಕಾನೂನಿನ ಸಂಘರ್ಷಕ್ಕೆ ಒಳಗಾದರೆ ಆರ್ಥಿಕ, ಸಾಮಾಜಿಕ ಮತ್ತು ಭೌತಿಕವಾಗಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ ಮಾತನಾಡಿ, ಪಠ್ಯ ವಿಷಯದ ಜತೆಗೆ ಸಾಮಾಜಿಕ ಮೌಲ್ಯಗಳು ಮತ್ತು ದಿನ ಬಳಕೆ ಕಾನೂನುಗಳನ್ನು ಮಕ್ಕಳಿಗೆ ತಿಳಿಸಿಕೊಡುವುದು ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದರು.  ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಡಿ. ನೂರ್ ಅಹಮ್ಮದ್ ಮಾತನಾಡಿ ಸಾರ್ವಜನಿಕರು ಪೊಲೀಸರಿಗೆ ಸೂಕ್ತ ಸಮಯದಲ್ಲಿ ಸರಿಯಾದ ಮಾಹಿತಿ ನೀಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದರು.  ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ಅಮೃತ ವಿದ್ಯಾಲಯಂ ಪ್ರಾಚಾರ್ಯೆ ಎನ್. ಪ್ರತಿಭಾ, ಅಮೃತ ಪಿ.ಯು. ಕಾಲೇಜಿನ ಪ್ರಾಚಾರ್ಯ ಡಾ.ಎನ್.ಸಿ. ವಿವೇಕ್ ಇದ್ದರು.