ಜಿಲ್ಲೆ

ಲೋಕ ಅದಾಲತ್‌ನಲ್ಲಿ ಒಂದಾದ 25 ಜೋಡಿ

ರಮೇಶ ಜಹಗೀರದಾರ್

ದಾವಣಗೆರೆ :  ಜಿಲ್ಲೆಯ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ, ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಪ್ರಕರಣ ದಾಖಲಿಸಿದ್ದ 25 ಜೋಡಿಗಳು ಒಂದಾದವು.  ದಾವಣಗೆರೆ ಕೌಟುಂಬಿಕ ನ್ಯಾಯಾಲಯದಲ್ಲಿ 17 ಜೋಡಿ, ಹರಿಹರ ತಾಲೂಕಿನಲ್ಲಿ 3, ಚನ್ನಗಿರಿ ಮತ್ತು ಜಗಳೂರು ತಾಲೂಕಿನಲ್ಲಿ ತಲಾ 2, ಹೊನ್ನಾಳಿ ತಾಲೂಕಿನಲ್ಲಿ 1 ಜೋಡಿ ಮತ್ತೊಮ್ಮೆ ಸಹಬಾಳ್ವೆ ನಡೆಸುವ ನಿರ್ಧಾರ ಮಾಡಿದರು.  ಒಂದಾದ ಜೋಡಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮತ್ತಿತರ ನ್ಯಾಯಾಧೀಶರು ಶುಭ ಹಾರೈಸಿ ಸಿಹಿ ಹಂಚಿದರು. ಜವಳಿ ವ್ಯಾಪಾರಿಯೊಬ್ಬರು ಒಂದಾದ ಜೋಡಿಗಳಿಗೆ ಸೀರೆ ಇತ್ಯಾದಿ ಉಡುಗೊರೆ ನೀಡಿದರು.  ಲೋಕ ಅದಾಲತ್‌ನಲ್ಲಿ, ಜಾರಿಯಲ್ಲಿರುವ 7042 ಪ್ರಕರಣಗಳು ಮುಕ್ತಾಯಗೊಂಡು 11.48 ಕೋಟಿ ರೂ.ಗಳ ಪರಿಹಾರ ಆಗಿದೆ.  ಒಟ್ಟು 1.46 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 61.38 ಕೋಟಿ ರೂ.ಗಳ ಪರಿಹಾರವಾಗಿ ರಾಜಿ ಸಂಧಾನದ ಮೂಲಕ ಮುಕ್ತಾಯಗೊಂಡವು.