ಜಿಲ್ಲೆ

ಬಿಜೆಪಿಯ ಭದ್ರಕೋಟೆ ಕಾಂಗ್ರೆಸ್ ವಶ

ರಮೇಶ ಜಹಗೀರದಾರ್

 ರಮೇಶ ಜಹಗೀರದಾರ್ ದಾವಣಗೆರೆ
 ದಾವಣಗೆರೆ ಲೋಕಸಭಾ ಕ್ಷೇತ್ರವನ್ನು ಗೆಲ್ಲುವ ಮೂಲಕ ಕಾಂಗ್ರೆಸ್, ಬರೋಬ್ಬರಿ 25 ವರ್ಷಗಳ ನಂತರ ಬಿಜೆಪಿಯ ಭದ್ರಕೋಟೆಯನ್ನು ವಶಕ್ಕೆ ಪಡೆದುಕೊಂಡಿದೆ.
 ಡಾ. ಪ್ರಭಾ ಮಲ್ಲಿಕಾರ್ಜುನ್ ಆಯ್ಕೆಯೊಂದಿಗೆ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಸಂಸದೆಯೊಬ್ಬರು ಪಾರ್ಲಿಮೆಂಟ್ ಪ್ರವೇಶಿಸಲಿದ್ದಾರೆ.
 ಕಳೆದ 5 ಅವಧಿ ಇಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. 1999 ರಲ್ಲಿ ಭೀಮಸಮುದ್ರದ ಜಿ. ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. 2004 ರಿಂದ ಇಲ್ಲಿಯ ವರೆಗೆ ಅವರ ಪುತ್ರ ಜಿ.ಎಂ. ಸಿದ್ದೇಶ್ವರ ಸತತ 4 ಬಾರಿ ಪ್ರತಿನಿಧಿಸಿದ್ದರು.
 ಹಾಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ 2004 ರಿಂದ ಸತತ 3 ಚುನಾವಣೆಗಳಲ್ಲಿ ಸೋಲು ಕಂಡಿದ್ದರು. ಈ ಬಾರಿ ಅವರ ಪತ್ನಿ ಪ್ರಭಾ ಗೆಲ್ಲುವ ಮೂಲಕ ಪತಿಯ ಸೋಲಿನ ಸೇಡು ತೀರಿಸಿಕೊಂಡಂತಾಗಿದೆ.
 ಪ್ರಭಾ ಮಲ್ಲಿಕಾರ್ಜುನ್ ಗೆಲುವಿನ ದಡ ಸೇರಲು ಹಲವು ಅಂಶಗಳು ಕಾರಣವಾದವು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಅವರಿಗೆ ಬಲ ತಂದು ಕೊಟ್ಟವು. ಹಿಂದಿನ ಚುನಾವಣೆಗಳ ಸೋಲಿನಿಂದ ಪಾಠ ಕಲಿತು ಕಾಂಗ್ರೆಸ್ ರೂಪಿಸಿದ ಯೋಜಿತ ಕಾರ್ಯತಂತ್ರ ಫಲಿಸಿತು. 8 ವಿಧಾನಸಭಾ ಕ್ಷೇತ್ರಗಳ ಪೈಕಿ ಹರಿಹರ ಒಂದನ್ನು ಬಿಟ್ಟು 7 ರಲ್ಲಿ ಕಾಂಗ್ರೆಸ್ ಶಾಸಕರೇ ಇರುವುದು ಪೂರಕವಾಯಿತು.
 ಪ್ರಭಾ ಅವರ ವೈಯಕ್ತಿಕ ವರ್ಚಸ್ಸು ಕೂಡಾ ಮತದಾರರ ಮೇಲೆ ಪರಿಣಾಮ ಬೀರಿತು. ಎಸ್.ಎಸ್. ಕೇರ್ ಟ್ರಸ್ಟ್ನ ಲೈಫ್ ಟ್ರಸ್ಟಿಯಾಗಿ ಅವರು ಮಾಡಿದ ಸಾಮಾಜಿಕ ಕಾರ್ಯಗಳು ಜನರ ನಡುವೆ ಗುರುತಿಸಿಕೊಳ್ಳಲು ನೆರವಾದವು.
 ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ ಕುಮಾರ್ ಕಾಂಗ್ರೆಸ್‌ಗೆ ತೊಡಕಾಗಬಹುದು ಎಂದು ಭಾವಿಸಲಾಗಿತ್ತು. ಅವರು ಕುರುಬ ಸಮುದಾಯದ ಮತಗಳನ್ನು ಹೆಚ್ಚಾಗಿ ಸೆಳೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ವಿನಯ್ ಕುಮಾರ್‌ಗೆ ಬೆಂಬಲಿಸಬೇಡಿ ಎಂದು ಕರೆ ನೀಡಿದ್ದು ಚಿತ್ರಣವನ್ನು ಬದಲಿಸಿತು ಎನ್ನಲಾಗಿದೆ.
 ಬಿಜೆಪಿಗೆ ಈ ಸೋಲು ಆಘಾತಕಾರಿಯಾಗಿದೆ. 25 ವರ್ಷಗಳಿಂದ ನಿರಂತರವಾಗಿ ಗೆಲ್ಲುತ್ತ ಬಂದಿದ್ದ ಕ್ಷೇತ್ರವನ್ನು ಕಳೆದುಕೊಂಡಿದ್ದು ಕಮಲ ಪಾಳಯಕ್ಕೆ ದೊಡ್ಡ ನಷ್ಟವಾಗಿದೆ.
 ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿತ್ತು. ಪ್ರಧಾನಿ ಮೋದಿ ಅಲೆ, ಡಬಲ್ ಇಂಜಿನ್ ಸರ್ಕಾರದ ಸಾಧನೆಗಳು ಅವರ ಕೈ ಹಿಡಿಯಲಿಲ್ಲ. ಬಿಜೆಪಿಯೊಳಗೆ ಅಸಮಾಧಾನಿತ ನಾಯಕರು ಪೂರ್ಣ ಮನಸ್ಸಿನಿಂದ ಕೆಲಸ ಮಾಡಲಿಲ್ಲ ಎಂಬ ಮಾತು ಕ್ಷೇತ್ರದಲ್ಲಿ ಕೇಳಿಬಂದಿತ್ತು.
 ...
 ಸೋಲು-ಗೆಲುವಿನ ಕಾರಣಗಳು
 * ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಲ
 * ಕಾಂಗ್ರೆಸ್‌ನ ಯೋಜಿತ ಕಾರ್ಯತಂತ್ರ
 * 7 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿರುವುದು
 * ಕಾಂಗ್ರೆಸ್ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು
 * ಬಿಜೆಪಿಯ ಕೆಲ ನಾಯಕರು ಪೂರ್ಣ ಮನಸ್ಸಿನಿಂದ ಕೆಲಸ ಮಾಡದಿರುವುದು
 * ಆಡಳಿತ ವಿರೋಧಿ ಅಲೆ