ಜಿಲ್ಲೆ

ದಾವಣಗೆರೆಯುಲ್ಲಿ ಖೋಟಾ ನೋಟು ಜಾಲ; ಇಬ್ಬರ ಸೆರೆ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆಯಾಗಿದೆ. ಕಲರ್ ಜೆರಾಕ್ಸ್ ಯಂತ್ರದಿಂದ ಖೋಟಾ ನೋಟು ತಯಾರಿಸಿ, ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಡಿಸಿಆರ್‌ಬಿ ಪೊಲೀಸರು ಸೆರೆ ಹಿಡಿದಿದ್ದಾರೆ.

ಬಂಧಿತರಿಂದ 1.20 ಲಕ್ಷ ರೂ. ಮೊತ್ತದ ನಕಲಿ ನೋಟು ಹಾಗೂ ಜೆರಾಕ್ಸ್ ಯಂತ್ರ, 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ ಯಲ್ಲಮ್ಮ ನಗರದ ಎಸ್.ಅಶೋಕ, ಹರಪನಹಳ್ಳಿ ತಾಲೂಕು ಹಲುವಾಗಲು ಗ್ರಾಮದ ಹಾಲೇಶಿ ಆಲಿಯಾಸ್ ಅರಸನಾಳು ಹಾಲೇಶಿ ಬಂಧಿತ ಆರೋಪಿಗಳಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಯಲ್ಲಮ್ಮ ನಗರದ 4ನೇ ಮುಖ್ಯ ರಸ್ತೆ, 6ನೇ ಕ್ರಾಸ್‌ನಲ್ಲಿ ಖೋಟಾ ನೋಟು ತಯಾರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು 100 ರೂ. ಮುಖಬೆಲೆಯ 26 ನೋಟು, 200 ರೂ. ಮುಖಬೆಲೆಯ 133 ನೋಟು ಹಾಗೂ 500 ರೂ. ಮುಖಬೆಲೆಯ 183 ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಮರಳು ದಂಧೆ ನಡೆಸುವ ಆರೋಪಿಗಳು 2 ತಿಂಗಳ ಹಿಂದಷ್ಟೇ ಕಲರ್ ಜೆರಾಕ್ಸ್ ಯಂತ್ರ ಖರೀದಿಸಿದ್ದರು. ಇದರಿಂದ ದಪ್ಪ ಕಾಗದದಲ್ಲಿ ನೋಟಿನ ಜೆರಾಕ್ಸ್ ಪ್ರತಿ ತೆಗೆದು, ಮಧ್ಯದ ಗೆರೆಗೆ ಬಣ್ಣ ಹಾಕುತ್ತಿದ್ದರು.

ಆರೋಪಿ ಹಾಲೇಶಿ 2019ರಲ್ಲಿ ಹರಪನಹಳ್ಳಿಯಲ್ಲಿ 3 ನೋಟುಗಳನ್ನು ಚಲಾವಣೆ ಮಾಡಿದ್ದ. ಈ ತಂಡ ತಯಾರಿಸಿದ ನೋಟುಗಳಲ್ಲಿ 4-5 ನೋಟುಗಳು ಚಲಾವಣೆ ಆಗಿರಬಹುದು. ಆದರೆ ದೊಡ್ಡ ಮೊತ್ತದ ಹಣ ಚಲಾವಣೆ ಆಗಿದೆಯೇ? ಎಂಬುದರ ತನಿಖೆ ನಡೆಯುತ್ತಿದೆ.

ಐದಕ್ಕೂ ಹೆಚ್ಚು ಖೋಟಾ ನೋಟುಗಳು ಪತ್ತೆಯಾದಲ್ಲಿ ಆರ್‌ಬಿಐಗೆ ಮಾಹಿತಿ ನೀಡುವುದು ಕಡ್ಡಾಯ. ಹೀಗಾಗಿ ಇದನ್ನು ಆರ್‌ಬಿಐ ಗಮನಕ್ಕೆ ತರಲಾಗುವುದು. ಪ್ರಕರಣವನ್ನು ಸಿಇಎನ್ ಠಾಣೆಗೆ ವಹಿಸಲಾಗುವುದು ಎಂದರು.

ನಾಗರಿಕರು ಎಚ್ಚರ ವಹಿಸಲಿ ಅಂಗಡಿ ಮಾಲೀಕರು, ಗ್ರಾಹಕರು ನೋಟುಗಳನ್ನು ಪಡೆಯುವಾಗ ಎಚ್ಚರ ವಹಿಸಬೇಕು. ಅದರ ಅಸಲಿಯತ್ತು ಪರಿಶೀಲಿಸಿ ಪಡೆಯಬೇಕು. ಮತ್ತು ಇಂತಹ ನೋಟು ಚಲಾವಣೆ ಆಗುತ್ತಿದ್ದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಈ ಮೂಲಕ ಮತ್ತೊಬ್ಬರು ಮೋಸ ಹೋಗುವುದನ್ನು ಹಾಗೂ ಈ ಜಾಲ ತಡೆಯಲು ನೆರವಾಗಲಿದೆ ಎಂದು ಎಸ್ಪಿ ಹೇಳಿದರು.