ಜಿಲ್ಲೆ

ತ್ಯಾಜ್ಯ ಕರಗಿಸಲು ಪಾಲಿಕೆ ಮಾರ್ಗೋಪಾಯ

ರಮೇಶ ಜಹಗೀರದಾರ್

ರಮೇಶ ಜಹಗೀರದಾರ್ ದಾವಣಗೆರೆ
 ದಿನಕ್ಕೆ 170 ಟನ್‌ನಷ್ಟು ಉತ್ಪತ್ತಿಯಾಗುವ ತ್ಯಾಜ್ಯದ ವಿಲೇವಾರಿ ದಾವಣಗೆರೆ ಮಹಾನಗರ ಪಾಲಿಕೆಗೆ ದೊಡ್ಡ ಸವಾಲಾಗಿದೆ. ಆವರಗೊಳ್ಳದ ಬಳಿಯ ಘಟಕಕ್ಕೆ ಬಂದು ಬೀಳುವ ಬೃಹತ್ ಪ್ರಮಾಣದ ಕಸದ ಒತ್ತಡ ಕಡಿಮೆ ಮಾಡಲು ಹಲವು ಮಾರ್ಗೋಪಾಯಗಳನ್ನು ಅನುಸರಿಸಲಾಗುತ್ತಿದೆ.
 ಮನೆಗಳಲ್ಲೇ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವುದು, ದೇವಸ್ಥಾನಗಳಲ್ಲಿ ಉತ್ಪತ್ತಿಯಾಗುವ ಹಣ್ಣು, ಹೂವಿನ ತ್ಯಾಜ್ಯವನ್ನು ಅಲ್ಲಲ್ಲೇ ಗೊಬ್ಬರವಾಗಿಸುವುದು, ಆವರಗೊಳ್ಳದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿನ ಪಾರಂಪರಿಕ ತ್ಯಾಜ್ಯವನ್ನು ಬಯೋ ಮೈನಿಂಗ್ ಮಾಡುವುದು, ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸಿ ವಿದ್ಯುತ್ ಆಗಿ ಪರಿವರ್ತಿಸುವ ಯೋಜನೆಗಳು ಒಂದೊಂದಾಗಿ ಕಾರ್ಯರೂಪಕ್ಕೆ ಬರುತ್ತಿವೆ.
 
 * ಬಯೋ ಮೈನಿಂಗ್
 ಆವರಗೊಳ್ಳ ಘಟಕದ 16 ಎಕರೆ ಪ್ರದೇಶದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪ್ರತಿ ದಿನ 90 ರಿಂದ 95 ಟನ್ ಹಸಿ ಕಸ, 55 ಟನ್ ಒಣ ತ್ಯಾಜ್ಯ, ಜತೆಗೆ ಬೀದಿ ಕಸ, ಸ್ಯಾನಿಟರಿ ತ್ಯಾಜ್ಯ ಸೇರಿಕೊಳ್ಳುತ್ತಿದೆ. ಈ ರೀತಿ ಕಳೆದ 15 ರಿಂದ 18 ವರ್ಷಗಳಲ್ಲಿ ಒಟ್ಟು 2.5 ಲಕ್ಷ ಟನ್ ಪಾರಂಪರಿಕ ತ್ಯಾಜ್ಯದ ಸಂಗ್ರಹವಿದೆ. ಅಷ್ಟನ್ನು ಕರಗಿಸುವುದು ಸುಲಭದ ಕೆಲಸವಲ್ಲ.
 ಅದಕ್ಕಾಗಿಯೇ ತ್ಯಾಜ್ಯದ ಬಯೋ ಮೈನಿಂಗ್ ಮಾಡಲು 21 ಕೋಟಿ ರೂ.ಗಳ ಟೆಂಡರ್ ಅನ್ನು ಕರೆಯಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡು ಕೆಲಸ ಶುರುವಾದರೆ ತ್ಯಾಜ್ಯದ ಭಾರ ಕ್ರಮೇಣ ಇಳಿಕೆಯಾಗುವ ನಿರೀಕ್ಷೆ ಪಾಲಿಕೆಗಿದೆ.
 
 * ಬಯೋ ಗ್ಯಾಸ್
 ತ್ಯಾಜ್ಯದಿಂದ ಜೈವಿಕ ಅನಿಲ (ಬಯೋ ಗ್ಯಾಸ್) ಉತ್ಪಾದಿಸಿ ಅದರಿಂದ ವಿದ್ಯುತ್ ಆಗಿ ಪರಿವರ್ತಿಸುವ 70 ಲಕ್ಷ ರೂ.ಗಳ ಯೋಜನೆಗೆ ಕಾರ್ಯಾದೇಶ ನೀಡಲಾಗಿದೆ.
 ಈ ಘಟಕದಲ್ಲಿ 2 ಟನ್‌ನಷ್ಟು ಹಸಿ ಕಸವನ್ನು ಉಪಯೋಗಿಸಲಾಗುತ್ತದೆ. ಅದರಿಂದ ಉತ್ಪಾದನೆಯಾಗುವ ವಿದ್ಯುತ್ ಅನ್ನು ಬೀದಿ ದೀಪ ಮತ್ತು ಕಚೇರಿಯ ಉದ್ದೇಶಕ್ಕೆ ಬಳಸಲು ಉದ್ದೇಶಿಸಲಾಗಿದೆ. ಈ ಯೋಜನೆ ಸದ್ಯದಲ್ಲೇ ಅನುಷ್ಠಾನಕ್ಕೆ ಬರಲಿದೆ.