ದಾವಣಗೆರೆ : ಮಹಾನಗರ ಪಾಲಿಕೆ, ವಲಯ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮತ್ತು ಅನಗತ್ಯ ಅಲೆದಾಟವನ್ನು ತಪ್ಪಿಸಬೇಕು ಎಂದು ಪ್ರತಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ನೇತೃತ್ವದ ನಿಯೋಗ ಆಗ್ರಹಿಸಿದೆ.
ನಿಯೋಗದ ಸದಸ್ಯರು ಬುಧವಾರ ಈ ಕುರಿತು ಮೇಯರ್ ವಿನಾಯಕ ಪೈಲ್ವಾನ್ ಹಾಗೂ ಪಾಲಿಕೆಯ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪಾಲಿಕೆಯಲ್ಲಿ ಹೊಸ ವಾರ್ಡುಗಳನ್ನು ಶೀಘ್ರವಾಗಿ ವಲಯ ಕಚೇರಿಗೆ ಸೇರಿಸಬೇಕು, ಅಲ್ಲಿ ಬ್ಯಾಂಕ್ ಕೌಂಟರ್ ತೆರೆಯಬೇಕು. ಸಾರ್ವಜನಿಕರು 100 ರೂ. ಶುಲ್ಕ ಕಟ್ಟಲೂ ಅಲೆದಾಡುವ ಸ್ಥಿತಿ ಇದೆ. ಇದನ್ನು ತಪ್ಪಿಸಬೇಕು ಮತ್ತು 48 ಗಂಟೆಗಳಲ್ಲಿ ಇ-ಆಸ್ತಿ ಖಾತೆ ನಕಲು ನೀಡಲು ಕ್ರಮ ಕೈಗೊಳ್ಳಬೇಕು. ಅರ್ಜಿ ಸಲ್ಲಿಸಿದ 31 ರಿಂದ 40 ದಿನದಲ್ಲಿ ಖಾತೆ ಬದಲಾವಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಲಯ ಕಚೇರಿ-2 ಅನ್ನು ಹೊಸದಾಗಿ ನಿರ್ಮಾಣಗೊಂಡಿರುವ ಲೋಕಿಕೆರೆ ರಸ್ತೆಯಲ್ಲಿರುವ ಟಿ.ವಿ. ಸ್ಟೇಷನ್ ಎದುರಿನ ಕಟ್ಟಡಕ್ಕೆ ಸ್ಥಳಾಂತರಿಸುವುದರಿಂದ ವಾರ್ಡ್ ಸಂಖ್ಯೆ: 18, 19, 20, 21, 25, 26, 27 ಮತ್ತು 28 ರಲ್ಲಿ ವಾಸಿಸುವ ಜನರಿಗೆ ಈ ವಲಯ ಕಚೇರಿಯು 4-5 ಕಿ.ಮೀ. ದೂರವಾಗುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಬಸಾಪುರ, ಆವರಗೆರೆ ಮತ್ತು ಡಿ.ಸಿ.ಎಂ. ನಿವಾಸಿಗಳಿಗೆ 8-10 ಕಿ.ಮೀ. ದೂರವಾಗುತ್ತದೆ. ಈ ವಿಷಯವನ್ನು ಅ. 31ರಂದು
ನಡೆದ ಸಾಮಾನ್ಯ ಸಭೆಯಲ್ಲಿ ಚರ್ಚಿಸಿದ್ದು, ಇದುವರೆಗೂ ಕ್ರಮ ಕೈಗೊಂಡಿರುವುದಿಲ್ಲ. ಕೂಡಲೇ ಈ ವಾರ್ಡ್‌ಗಳಿಗೆ ಸಂಬಂಧಿಸಿದ ಕಂದಾಯ ಕಚೇರಿಯನ್ನು ಈ ಹಿಂದಿನಂತೆ ಮುಖ್ಯ ಕಚೇರಿಯಲ್ಲಿಯೇ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದರು.
ವಾರ್ಡ್ ನಂ. 31, 39 ಮತ್ತು 41 ಎಸ್.ಒ.ಜಿ. ಕಾಲನಿ, ರಾಮನಗರ, ಬನಶಂಕರಿ ಬಡಾವಣೆ, ವಿದ್ಯಾನಗರ, ತರಳಬಾಳು ಬಡಾವಣೆಗಳಲ್ಲಿ ವಾಸಿಸುವ ಜನರಿಗೆ ವಲಯ ಕಚೇರಿ-2 ಹತ್ತಿರ ಇರುವುದರಿಂದ ಆ ವಾರ್ಡ್‌ಗಳನ್ನು ವಲಯ ಕಚೇರಿ-3 ರಿಂದ ತೆಗೆದು ವಲಯ ಕಚೇರಿ-2 ರಲ್ಲಿ ನಿರ್ವಹಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಾರ್ವಜನಿಕರು ಖಾತೆ ವಿವಿಧ ಶುಲ್ಕಗಳನ್ನು ಪಾವತಿಸಲು ಸಂಬಂಧಿಸಿದ ವಲಯ ಕಚೇರಿಯಲ್ಲೇ ಪಡೆಯಬೇಕು. ನಂತರ ಅದನ್ನು ಪಾವತಿಸಲು ಪುನಃ ಮುಖ್ಯ ಕಚೇರಿಗೆ ಬಂದು ಪಾವತಿಸಿದ ಚಲನ್ ಪ್ರತಿಯನ್ನು ವಾಪಸ್ ವಲಯ ಕಚೇರಿಯಲ್ಲಿಯೇ ನೀಡಬೇಕು. ಇದರಿಂದ ಸಾರ್ವಜನಿಕರಿಗೆ ಕಾಲ ವ್ಯರ್ಥವಾಗುವುದರ ಜತೆಗೆ ಅಲೆದಾಡಬೇಕಾಗುತ್ತದೆ. ಆದ್ದರಿಂದ ಪ್ರತಿ ವಲಯ ಕಚೇರಿಯಲ್ಲಿ ಕೌಂಟರ್ ತೆರೆಯಬೇಕು ಎಂದು ಆಗ್ರಹಿಸಿದರು.
ಇ-ಆಸ್ತಿ ಯೋಜನೆಯಡಿ ಹಲವು ದಿನ, ತಿಂಗಳುಗಳಾದರೂ ಖಾತೆ ನಕಲು ಸಿಕ್ಕಿಲ್ಲವೆಂಬ ಅಸಮಾಧಾನ ಸಾರ್ವಜನಿಕರಲ್ಲಿದೆ. ಅನಗತ್ಯ ವಿಳಂಬ ತಪ್ಪಿಸಿ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಖಾತಾ ನಕಲು ನೀಡಲು ಮತ್ತು 31 ರಿಂದ 40 ದಿನಗಗಳಲ್ಲಿ ಖಾತೆ ಬದಲಾವಣೆ ಮಾಡಿಕೊಡಲು ಇನ್ನೊಂದು ವಾರದಲ್ಲಿ ಕ್ರಮ ಕೈಗೊಳ್ಳದೇ ಹೋದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಕೆ.ಎಂ. ವೀರೇಶ್, ವೀಣಾ ನಂಜಪ್ಪ, ಮುಖಂಡ ಕುಂಬಾರ್ ನಾಗಪ್ಪ ಇದ್ದರು.