ದಾವಣಗೆರೆ: ದಿನವೂ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆಯೇ ಕೇಳಿ ಆತಂಕಗೊಂಡಿದ್ದ ಜಿಲ್ಲೆಯ ಜನರಿಗೆ ಬುಧವಾರ ಗುಡ್‌ನ್ಯೂಸ್ ಕಾದಿತ್ತು. ಸೋಂಕಿಗೆ ಒಳಗಾಗಿದ್ದ 7 ಮಂದಿ ಗುಣಮುಖರಾಗಿದ್ದಾರೆ.
ಹದಿನಾರು ವರ್ಷದ ಬಾಲಕ (ಪಿ-585), 11 ವರ್ಷದ ಬಾಲಕ (ಪಿ-635) ಮತ್ತು 52 ವರ್ಷದ ಮಹಿಳೆ (ಪಿ-616) ಇವರನ್ನು ಕಳೆದ ತಿಂಗಳು 30ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. 20 ದಿನಗಳ ಕಾಲ ವೈರಸ್ ಜತೆಗೆ ಹೋರಾಡಿದ ಮೂವರು ಸಂಪೂರ್ಣ ಗುಣಮುಖರಾಗಿ ಬೆಳಗ್ಗೆ ಮನೆಗೆ ಮರಳಿದರು.
ಅವರ ಬಿಡುಗಡೆ ಹಿನ್ನೆಲೆಯಲ್ಲಿ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಒಬ್ಬೊಬ್ಬರಾಗಿ ಆಸ್ಪತ್ರೆಯಿಂದ ಹೊರ ಬಂದ ಮೂವರ ಮೇಲೆ ಪುಷ್ಪವೃಷ್ಟಿ ಮಾಡಲಾಯಿತು. ಅವರ ಮುಂದಿನ ಜೀವನ ಆರೋಗ್ಯಕರವಾಗಿರಲಿ ಎಂದು ಹಾರೈಸಿ ಬೀಳ್ಕೊಡಲಾಯಿತು.
ಸಂಜೆ ಕರೊನಾದಿಂದ ಗುಣಮುಖರಾದ, ಆದರೆ ಇತರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಇರುವ ರೋಗಿ ಸಂಖ್ಯೆ 580, 584(ಹೃದಯ ರೋಗ) 583 ಮತ್ತು 617 ಅವರನ್ನು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ, ನಾನ್ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಅಲ್ಲಿ ಅವರು ಒಂದೆರಡು ದಿನಗಳ ಕಾಲ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಲಿದ್ದಾರೆ. ಈ ಹಿಂದೆ ವಿದೇಶ ಪ್ರಯಾಣ ಹಿನ್ನೆಲೆ ಹೊಂದಿದ್ದ ಇಬ್ಬರು ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿನಿಂದ 9 ಮಂದಿ ಗುಣಮುಖರಾದಂತಾಗಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದವರಿಗೆ ಬೀಳ್ಕೊಡುಗೆ ನೀಡಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಇದು ಎರಡನೇ ಕಂತಿನ ಬಿಡುಗಡೆಯಾಗಿದೆ. ಸದ್ಯದಲ್ಲೇ ಇನ್ನೂ 12 ಜನರ ವರದಿ ನೋಡಿಕೊಂಡು ವೈದ್ಯರ ಸಲಹೆ ಮೇರೆಗೆ ಸರ್ಕಾರದ ನಿಯಮದಂತೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಅತ್ಯಂತ ಪರಿಣತಿ ಹೊಂದಿದ ವೈದ್ಯರು ನಮ್ಮ ಜಿಲ್ಲೆಯಲ್ಲಿದ್ದಾರೆ. ಎಲ್ಲರ ಪ್ರಯತ್ನದಿಂದ ಇದು ಸಾಧ್ಯವಾಗಿದೆ ಎಂದರು.
ಮೇಯರ್ ಬಿ.ಜಿ. ಅಜಯ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಶತಕವನ್ನು ದಾಟಿದೆ. ಈ ಸಂಖ್ಯೆಯು ಶೂನ್ಯಕ್ಕೆ ಇಳಿಕೆಯಾಗುವ ವಿಶ್ವಾಸವಿದೆ ಎಂದರು.
ಎಸ್ಪಿ ಹನುಮಂತರಾಯ ಮಾತನಾಡಿ, ಕಂಟೇನ್ಮೆಂಟ್ ವಲಯಗಳಲ್ಲಿ ಎಲ್ಲರೂ ಸಹಕರಿಸಬೇಕು. ಯಾರೂ ಅನವಶ್ಯಕವಾಗಿ ಹೊರಗೆ ಬರಬಾರದು. ಅಲ್ಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸರ್ಕಾರದ ನಿಯಮದಂತೆ ನಗರದಲ್ಲಿ ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಯಾರೊಬ್ಬರೂ ಗುಂಪು ಕಟ್ಟಿಕೊಂಡು ನಿಲ್ಲಬಾರದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮಾಸ್ಕ್ ಹಾಕಿಕೊಂಡು ಓಡಾಡಬೇಕು. ಇಲ್ಲವಾದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾ ಶಸ್ತ್ರಚಿಕಿತ್ಸಕ ಸುಭಾಷ್‌ಚಂದ್ರ ಇದ್ದರು.