ಜಿಲ್ಲೆ

ಸುತ್ತೋಲೆ ಸೌಹಾರ್ದ ಸಹಕಾರಿಗಳಿಗೆ ಮಾರಕ

ರಮೇಶ ಜಹಗೀರದಾರ್

ದಾವಣಗೆರೆ : ಸರ್ಕಾರ ಸೌಹಾರ್ದ ಸಹಕಾರಿಗಳಿಗೆ ವಿಧಿಸಿರುವ ಬಡ್ಡಿದರ ಮತ್ತು ಇತರೆ ಅಂಶಗಳ ಸುತ್ತೋಲೆಯು ಸೌಹಾರ್ದ ಸಹಕಾರಿಗಳಿಗೆ ಮಾರಕವಾಗಲಿದೆ ಎಂದು ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ. ನಂಜನಗೌಡ ಹೇಳಿದರು.  ಬೆಂಗಳೂರಿನ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯಿಂದ ನಗರದ ಬಂಟರ ಭವನದಲ್ಲಿ ಜಿಲ್ಲೆಯ ಸೌಹಾರ್ದ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಮುಖ್ಯಕಾರ್ಯನಿರ್ವಾಹಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಂಪರ್ಕ ಸಭೆ ಹಾಗೂ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಪ್ರಸ್ತುತ ಸುತ್ತೋಲೆಯು ನ್ಯಾಯಾಲಯದಲ್ಲಿದ್ದು, ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು. ಸೌಹಾರ್ದ ಸಹಕಾರಿಗಳ ನಡೆ ಗುಣಮಟ್ಟದ ಕಡೆಗೆ ಎಂಬ ಘೋಷವಾಕ್ಯದೊಂದಿಗೆ ಸಹಕಾರಿಗಳನ್ನು ನಡೆಸಬೇಕು ಎಂದು ತಿಳಿಸಿದರು.  ಸೌಹಾರ್ದ ಸಹಕಾರಿಗಳು ಸದಸ್ಯರ ಠೇವಣಿ ಹಣಕ್ಕೆ ಮೋಸ ಆಗದಂತೆ ನೋಡಿಕೊಳ್ಳಬೇಕು. ಸೌಹಾರ್ದ ಕಾಯ್ದೆಯ ವಿರುದ್ಧವಾಗಿ ಯಾವುದೇ ಸಂಸ್ಥೆ ನಡೆಸಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.  ಜಿಲ್ಲಾ ನಿರ್ದೇಶಕ ಎಂ.ಆರ್. ಪ್ರಭುದೇವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟ ಬಲಪಡಿಸಿ ಸೌಹಾರ್ದ ಚಳವಳಿಯ ಉಳಿವಿಗೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲು ಸಿದ್ಧರಾಗಬೇಕು ಎಂದು ತಿಳಿಸಿದರು.  ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಎ.ಆರ್. ಪ್ರಸನ್ನಕುಮಾರ್, ನಿರ್ದೇಶಕ ಬಿ.ಎಚ್. ಕೃಷ್ಣಾರೆಡ್ಡಿ ಅವರು ಸೌಹಾರ್ದ ಕಾಯ್ದೆಗೆ 2024 ರಲ್ಲಿ ತಂದಿರುವ ತಿದ್ದುಪಡಿ ವಿಷಯ ಪ್ರಸ್ತಾಪಿಸಿ ಸೌಹಾರ್ದ ಸಹಕಾರಿಗಳು ಕಾಯ್ದೆಯನುಸಾರ ಕಾರ್ಯನಿರ್ವಹಿಸಬೇಕು ಎಂದರು.  ದಾವಣಗೆರೆ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ಎಂ. ನಾಗರಾಜು, ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಎ.ಎಸ್. ಉಮೇಶ್, ಬೆಂಗಳೂರು ಪ್ರಾಂತೀಯ ಅಧಿಕಾರಿ ಎಸ್. ಶ್ರೀಧರ್ ಇದ್ದರು.