ಜಿಲ್ಲೆ

ವಿವಿಗಳ ಸ್ಥಿತಿಗತಿ ಅಧ್ಯಯನ ವರದಿ ಶೀಘ್ರ ಸಲ್ಲಿಕೆ

ರಮೇಶ ಜಹಗೀರದಾರ್

ದಾವಣಗೆರೆ  : ವಿಶ್ವವಿದ್ಯಾಲಯಗಳ ಸ್ಥಿತಿಗತಿ ಅಧ್ಯಯನ ಮಾಡಿ ಉನ್ನತ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ಸಲಹೆ ನೀಡಲು ಸರ್ಕಾರ ರಚಿಸಿರುವ ಸಂಪುಟ ಉಪ ಸಮಿತಿಯು ಕೆಲವೇ ದಿನಗಳಲ್ಲಿ ವರದಿ ನೀಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದರು.  ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 12ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿ, ವರದಿಯನ್ನು ಶೀಘ್ರದಲ್ಲೇ ಸಂಪುಟದ ಮುಂದೆ ಇಡಲಾಗುವುದು. ಈ ಸಲಹೆಗಳ ಆಧಾರದ ಮೇಲೆ ಸರ್ಕಾರ ತನ್ನ ಇತಿಮಿತಿಯೊಳಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 3500ಕ್ಕೂ ಹೆಚ್ಚು ಬೋಧಕ ಹುದ್ದೆಗಳ ಅಗತ್ಯವಿದೆ. ಈ ವಿಷಯವಾಗಿ ಸರ್ಕಾರಗಳು ನಿರಂತರವಾಗಿ ನಿರ್ಲಕ್ಷೃ ವಹಿಸುತ್ತ ಬಂದಿವೆ. ಆದರೆ ನಮ್ಮ ಸರ್ಕಾರ ಸುಧಾರಣೆ ತರುವ ಸಂಕಲ್ಪ ಮಾಡಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ತಿಳಿಸಿದರು.  ಹೆಚ್ಚು ಸಂಖ್ಯೆಯ ವಿಶ್ವ ವಿದ್ಯಾಲಯಗಳನ್ನು ಮಾಡುವುದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸುವುದಿಲ್ಲ. ಇರುವ ವ್ಯವಸ್ಥೆಯನ್ನೇ ಬಲಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.  ಇದೇ ವೇಳೆ ಶ್ರೀ ಕಾಗಿನೆಲೆ ಕನಕ ಗುರು ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ರೈತ ಹೋರಾಟಗಾರ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹಾಗೂ ಜೈವಿಕ ವಿಜ್ಞಾನಿ ಪ್ರೊ.ಎಸ್.ಆರ್. ನಿರಂಜನ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.  ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ ಪದ್ಮಭೂಷಣ ಪ್ರೊ. ಪಿ. ಬಲರಾಮ್ ಘಟಿಕೋತ್ಸವ ಭಾಷಣ ಮಾಡಿದರು. ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ, ಕುಲಸಚಿವರಾದ ಪ್ರೊ.ಸಿ.ಕೆ. ರಮೇಶ, ಪ್ರೊ.ಆರ್. ಶಶಿಧರ ಇದ್ದರು.  ...  (ಬಾಕ್ಸ್)  ರಾಷ್ಟ್ರ ನಿರ್ಮಾಣದಲ್ಲಿ ತೊಡಗಲು ಸಲಹೆ  ಜಗತ್ತಿನ ವಿಕಸಿತ ರಾಷ್ಟ್ರಗಳ ಪೈಕಿ ಭಾರತವನ್ನು ಅಗ್ರ ಸ್ಥಾನಕ್ಕೆ ತರಲು ಯುವಜನರು ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.  ಘಟಿಕೋತ್ಸವದಲ್ಲಿ ಪದವಿಗಳನ್ನು ಪ್ರದಾನ ಮಾಡಿ ಮಾತನಾಡಿ, ದೇಶದ ಆರ್ಥಿಕತೆ ಪ್ರಸ್ತುತ 5ನೇ ಸ್ಥಾನದಲ್ಲಿದೆ. ಅದನ್ನು ಇನ್ನಷ್ಟು ಸದೃಢಗೊಳಿಸಬೇಕಿದೆ. ಶ್ರೇಷ್ಠ ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಸಹಭಾಗಿಗಳಾಗಿ ಎಂದು ತಿಳಿಸಿದರು.  ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಹಸಿರನ್ನು ಕಾಪಾಡಿ ಶುದ್ಧ ಗಾಳಿ ಉಸಿರಾಡುವಂತಾಗಬೇಕು. ಸುಶಿಕ್ಷಿತ ಯುವಜನರಿಂದ ಎಲ್ಲ ಕ್ಷೇತ್ರಗಳಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಕನಸು ಕಾಣುವ ಜತೆಗೆ ಸಾಕಾರಗೊಳಿಸಬೇಕು ಎಂದು ಹೇಳಿದರು.