ದಾವಣಗೆರೆ : ಸಂವಿಧಾನವನ್ನು ಸಂರಕ್ಷಿಸಲು ಸಂಘಟಿತ ಪ್ರಯತ್ನ ಆಗಬೇಕಿದೆ. ಜನಾಂದೋಲನ ರೂಪುಗೊಳ್ಳಬೇಕಿದೆ. ಚಳವಳಿ, ಹೋರಾಟಗಳು ಒಂದೇ ವೇದಿಕೆಯಡಿ ಬರಬೇಕು. ಒಂದು ಲಕ್ಷ ಕಾರ್ಯಕರ್ತರ ಪಡೆ ಕಟ್ಟಬೇಕು. ಸಂವಿಧಾನ ಸಂರಕ್ಷಣಾ ಪಡೆ ವತಿಯಿಂದ ನಗರದ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ವ್ಯಕ್ತವಾದ ಆಶಯಗಳಿವು. ಜನಸಾಮಾನ್ಯರಿಗೆ ಸಂವಿಧಾನವನ್ನು ತಲುಪಿಸಿ ಅವರಲ್ಲಿ ಜಾಗೃತಿ ಮೂಡಿಸಬೇಕು. ಅವರು ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂಬ ಸಂದೇಶ ಕೇಳಿಬಂದಿತು. ರಾಜ್ಯದ ಪ್ರತಿ ಜಿಲ್ಲೆಯಿಂದ 3 ಸಾವಿರ, ತಾಲೂಕಿನಿಂದ 500, ಪ್ರತಿ ಊರಿನಿಂದ 3-4 ಜನರಂತೆ ಕಾರ್ಯಕರ್ತರ ಪಡೆಯನ್ನು ರೂಪಿಸಬೇಕಿದೆ. ಒಬ್ಬೊಬ್ಬರೂ ಕನಿಷ್ಠ 5 ಜನರನ್ನು ಮನವೊಲಿಸಿ ಈ ಪಡೆಗೆ ಸೆರ್ಪಡೆ ಮಾಡಿಸಬೇಕು ಎಂದು ಸಮಾವೇಶದಲ್ಲಿ ತಿಳಿಸಲಾಯಿತು. ಎದ್ದೇಳು ಕರ್ನಾಟಕ ಸೆಂಟ್ರಲ್ ವರ್ಕಿಂಗ್ ಗ್ರೂಪ್‌ನ ನೂರ್ ಶ್ರೀಧರ್ ಮಾತನಾಡಿ, ಮುಂಬರುವ ದಿನಗಳಲ್ಲಿ ಸಂವಿಧಾನ ಜಾಗೃತಿಗೆ ಜಿಲ್ಲೆ, ತಾಲೂಕು, ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸುವ ಉದ್ದೇಶವಿದೆ. ರಾಜ್ಯ ಸರ್ಕಾರದಿಂದಲೂ ನಮಗೆ ನಿರಾಸೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿದೆ. ಜುಲೈನಲ್ಲಿ ಜನಾಧಿವೇಶನ, ಒಂದು ವರ್ಷದೊಳಗೆ ಎಲ್ಲ ಜನ ಚಳವಳಿಗಳನ್ನು ಸೇರಿಸಿ ರಾಷ್ಟ್ರೀಯ ಸಮಾವೇಶ ಆಯೋಜಿಸುವ ಚಿಂತನೆಯಿದೆ ಎಂದರು. ಸ್ತ್ರೀವಾದಿ ಚಿಂತಕಿ, ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ, ಆರ್ಥಿಕ ವಿಶ್ಲೇಷಕ ಆಂಧ್ರಪ್ರದೇಶದ ಪರಕಾಲ ಪ್ರಭಾಕರ್, ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಮಧ್ಯ ಪ್ರದೇಶದ ಡಾ. ಸುನೀಲಮ್, ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರೆಗೋಡು, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಸಮಾವೇಶ ಸಂಘಟನಾ ಸಮಿತಿಯ ಸಂಚಾಲಕ ಕೆ.ಎಲ್. ಅಶೋಕ್ ಇತರರು ಇದ್ದರು. ... (ಬಾಕ್ಸೃ್) ಹಸಿರು, ನೀಲಿ, ಕೆಂಪು ಒಂದಾಗಲಿ ರೈತ ಹೋರಾಟ (ಹಸಿರು), ದಲಿತ ಹೋರಾಟ (ನೀಲಿ), ಸಮತಾವಾದಿ (ಕೆಂಪು) ಹೋರಾಟಗಳು ಒಂದೇ ವೇದಿಕೆಯಡಿ ಬರಬೇಕು ಎಂದು, ಸಮಾವೇಶ ಉದ್ಘಾಟಿಸಿದ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು. ನಮ್ಮ ಸೈದ್ಧಾಂತಿಕ ಬದ್ಧತೆ ಬಿಟ್ಟುಕೊಡದೇ ಸೈದ್ಧಾಂತಿಕ ಸಂಕುಚಿತತೆ ಮೀರಬೇಕು ಎಂದು ಅವರು ಸಲಹೆ ನೀಡಿದರು. ಪ್ರಶ್ನೆ ಮಾಡುವ ಜತೆಗೆ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಸಂವಿಧಾನವನ್ನು ಕೈಯಲ್ಲಿ ಹಿಡಿದವರು ಅದರ ಆಶಯ ಕರುಳಿಗೆ ಹೋಗಿದೆಯೇ ಎಂದು ನೋಡಬೇಕಿದೆ. ಕೈ ಮುಗಿದು ಭಕ್ತಿ ತೋರಿಸುವವರ ಅಂತರಂಗದ ಭಾಷೆ ಸಂವಿಧಾನ ಆಗಿದೆಯೆ ಎಂದು ತಿಳಿಯಬೇಕಿದೆ ಎಂದರು. ಕಾಶ್ಮೀರದ ಪೆಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ನೊಂದ ಕುಟುಂಬಗಳಿಗೆ ಅಲ್ಲಿನ ಜನರು ಜಾತಿ, ಧರ್ಮ ಭೇದವಿಲ್ಲದೇ ಮಾನವೀಯ ನೆರವು ನೀಡಿದ್ದು ನಮ್ಮ ಪರಂಪರೆಯ ಉದಾಹರಣೆಯಾಗಿದೆ ಎಂದು ತಿಳಿಸಿದರು. ... (ಬಾಕ್ಸೃ್) ಆರ್‌ಎಸ್‌ಎಸ್ ವಿರುದ್ಧ ಸಂವಿಧಾನ ಶಾಖೆ ಗುಜರಾತ್‌ನ ಶಾಸಕ, ಹೋರಾಟಗಾರ ಜಿಗ್ನೇಶ್ ಮೇವಾನಿ ಮಾತನಾಡಿ, ಆರ್‌ಎಸ್‌ಎಸ್ ನಡೆಸುವ ಶಾಖೆಗೆ ಪ್ರತಿಯಾಗಿ ಸಂವಿಧಾನ ಶಾಖೆಗಳನ್ನು ಆರಂಭಿಸುವ ಮೂಲಕ ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಆರ್‌ಎಸ್‌ಎಸ್ ಮತ್ತು ಬಿಜೆಪಿಯವರು ಸಂವಿಧಾನವನ್ನು ನಾಶ ಮಾಡುವ ನಿರ್ಧಾರ ಮಾಡಿದ್ದಾರೆ. ಹೊಸ ಪೀಳಿಗೆಯ ಯುವಜನರಿಗೆ ಸಂವಿಧಾನ ರಕ್ಷಣೆಯ ಹೊಣೆಯನ್ನು ಹೊರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ಮೋದಿ ಅವರು ಮಾತ್ರ ನಮ್ಮ ಹಿತ ಕಾಯಬಲ್ಲರು ಎಂಬ ಭಾವನೆ ಬಂಡವಾಳಶಾಹಿಗಳಲ್ಲಿ ಬೇರೂರಿದೆ, ಸಂವಿಧಾನ, ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತಬೇಕಿದೆ. ನಿಮ್ಮ ಹೋರಾಟಕ್ಕೆ ನಾನೂ ಕೈಜೋಡಿಸುವೆ ಎಂದು ಭರವಸೆ ನೀಡಿದರು.