ಜಿಲ್ಲೆ

ಯುವ ಜನೋತ್ಸವದಲ್ಲಿ ಗಮನ ಸೆಳೆದ ಅಭಿಯಾನ

ರಮೇಶ ಜಹಗೀರದಾರ್

ದಾವಣಗೆರೆ : ನಗರದ ಎಂಬಿಎ ಮೈದಾನದಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಪರಿಕಲ್ಪನೆಯಡಿ ಮೂಡಿಬಂದ ಸಂವಿಧಾನದ ಅರಿವಿನ ‘ಕೆವೈಸಿ ಅಭಿಯಾನ’ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.  ಅಭಿಯಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಅಭಿಯಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಬಗ್ಗೆ ಸಮಗ್ರ ಮಾಹಿತಿ ಹಾಗೂ ಸಂವಿಧಾನದ ಪೀಠಿಕೆ ಎಲ್ಲರ ಗಮನ ಸೆಳೆಯಿತು.  ಸಿಎಂ ಸಿದ್ದರಾಮಯ್ಯ ಸ್ವತಃ ಸಂವಿಧಾನ ಪೀಠಿಕೆ ತಯಾರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸಂವಿಧಾನವು ದೇಶದ ಕಾನೂನು, ಆಡಳಿತ ಮತ್ತು ನಾಗರಿಕರ ಹಕ್ಕುಗಳನ್ನು ವ್ಯಾಖ್ಯಾನಿಸುವ ಅತ್ಯುನ್ನತ ಕಾನೂನು ಚೌಕಟ್ಟಾಗಿದೆ.  ಸಂವಿಧಾನವನ್ನು 1950 ರ ಜ. 26 ರಂದು ಅಳವಡಿಸಿಕೊಳ್ಳಲಾಯಿತು. ದೇಶದ ಪ್ರಜಾಪ್ರಭುತ್ವದ ಬೆನ್ನೆಲುಬು ನಮ್ಮ ಸಂವಿಧಾನ. ಸರ್ಕಾರದ ಅಧಿಕಾರಗಳು ಮತ್ತು ರಾಜ್ಯದ ಜವಾಬ್ದಾರಿಗಳನ್ನು ಸಂವಿಧಾನ ವಿವರಿಸುತ್ತದೆ. ‘ನಾವು ಭಾರತದ ಜನರು’ ಎಂದು ಆರಂಭವಾಗುವ ಪೀಠಿಕೆಯು ರಾಷ್ಟ್ರದ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.  ಇದು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಒತ್ತಿ ಹೇಳುತ್ತದೆ. ಭಾರತದ ಪ್ರಜಾಸತ್ತಾತ್ಮಕ ಅಡಿಪಾಯವನ್ನು ಎತ್ತಿ ಹಿಡಿಯುವ, ನ್ಯಾಯಯುತ, ಮುಕ್ತ ಮತ್ತು ಏಕೀಕೃತ ಸಮಾಜವನ್ನು ಖಾತ್ರಿಪಡಿಸುವ ಪ್ರಮುಖ ತತ್ವಗಳಾಗಿವೆ ಎಂದು ಸಂಸದರು ವಿವರಿಸಿದರು. ಈ ಅಭಿಯಾನದ ಮೂಲಕ ವಿದ್ಯಾರ್ಥಿಗಳು, ಯುವಜನರು ಹಾಗೂ ಸಾರ್ವಜನಿಕರಲ್ಲಿ ನಮ್ಮ ಸಂವಿಧಾನದ ಸಮಗ್ರ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಯಿತು.