ದಾವಣಗೆರೆ: ಪ್ರಜಾಪ್ರಭುತ್ವದಲ್ಲಿ ಸಮಾಜದ ಎಲ್ಲ ವರ್ಗದವರು ಭಾಗಿಯಾಗಬೇಕು ಹಾಗೂ ಮಹಿಳೆಯರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ಮೀಸಲಾತಿ ಕಲ್ಪಿಸಿದವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ದಿನೇಶ್ ಕೆ. ಶೆಟ್ಟಿ ಸ್ಮರಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ದಿ.ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನದ 73-74 ತಿದ್ದುಪಡಿ ಮೂಲಕ ಮಹಿಳೆಯರಿಗೆ ಸ್ಥಳೀಯ ಮಟ್ಟದ ಚುನಾವಣೆಗಳಲ್ಲಿ ಶೇ.33 ಹಾಗೂ ಹಿಂದುಳಿದವರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿದರು. ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ಸಿಕ್ಕಿದೆ ಎಂದರೆ ಅದಕ್ಕೆ ರಾಜೀವ್ ಗಾಂಧಿ ಕಾರಣ. ಬಿಜೆಪಿ ಹಾಗೂ ಯಾವುದೇ ಪಕ್ಷದವರು ಇದನ್ನು ಜಾರಿಗೆ ತರಲಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ‌್ಯದರ್ಶಿ ಎಸ್.ಮಲ್ಲಿಕಾರ್ಜುನ್ ಮಾತನಾಡಿ, ರಾಜ್ಯದಲ್ಲಿ 1972ರಿಂದ 1980ರ ವರೆಗೆ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಸದಾ ಬಡವರು ಹಾಗೂ ಸಾಮಾಜಿಕ ನ್ಯಾಯದ ಪರವಾಗಿದ್ದರು. ಮಲ ಹೊರುವ ಪದ್ದತಿ ನಿಲ್ಲಿಸುವ ಮೂಲಕ ಜೀತಪದ್ದತಿಗೆ ಮಂಗಳ ಹಾಡಿದ್ದರು ಎಂದು ತಿಳಿಸಿದರು.
ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ಹರೀಶ್ ಕೆ.ಎಲ್. ಬಸಾಪುರ ಮಾತನಾಡಿ, ಇಂದಿರಾಗಾಂಧಿ ಅವರ ಬೆಂಬಲದೊಂದಿಗೆ ಉಳುವವನೇ ಭೂ ಒಡೆಯ ಎಂಬ ಯೋಜನೆ ತಂದರಲ್ಲದೆ ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದ್ದರು ಎಂದರು.
ಪ. ಜಾತಿ ಕಾಂಗ್ರೆಸ್‌ನ ರಾಕೇಶ್, ಎಲ್.ಎಚ್.ಸಾಗರ್ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಶಿವಕುಮಾರ್ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ಎ.ನಾಗರಾಜ್, ಕೊಡಪಾನ ದಾದಾಪೀರ್, ಎಚ್.ಜಯಣ್ಣ, ವಕೀಲ ಪರಮೇಶ್, ಲಿಯಾಕತ್ ಅಲಿ, ನಂಜಾನಾಯ್ಕ, ಬಾಬುರಾವ್ ಸಾಳಂಕಿ, ಜಿಕ್ರಿಯಾ, ಸುರೇಶ್ ಜಾಧವ್ ಇತರರು ಇದ್ದರು.