ಜಿಲ್ಲೆ

ಜಿಲ್ಲೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಶೀಘ್ರ ತನಿಖೆ

ರಮೇಶ ಜಹಗೀರದಾರ್

ದಾವಣಗೆರೆ : ಜಿಲ್ಲೆಯ ಎಲ್ಲ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಶೀಘ್ರ ತನಿಖೆ ನಡೆಯಲಿದ್ದು, ಬಿಜೆಪಿ ಸಂಸದರು ಹಾಗೂ ಶಾಸಕರು ಜೈಲಿಗೆ ಹೋಗಲು ಸಿದ್ಧರಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.
 ಎಲ್ಲ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತನಿಖೆಗೆ ಸೂಚಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಕುಂದುವಾಡ ಕೆರೆ ಹೂಳೆತ್ತಲು 16 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರೆ ಹೇಗೆ? ಸಂಸದರಿಗೆ ಈ ಬಗ್ಗೆ ಜವಾಬ್ದಾರಿ ಇಲ್ಲವೇ? ಎಂದು ಪ್ರಶ್ನಿಸಿದ ಅವರು ಕುಂದುವಾಡ ಕೆರೆ, ಹಳೇ ಬಸ್ ನಿಲ್ದಾಣ, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿ ಎಲ್ಲ ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಯಲಿದೆ. ಇದರಲ್ಲಿ ಭಾಗಿಯಾದ ಅಧಿಕಾರಿಗಳು ಸಹ ಬಯಲಿಗೆ ಬರಲಿದ್ದಾರೆ ಎಂದರು.
 ಕಾಂಗ್ರೆಸ್ ಪಕ್ಷ ಎಂದಿಗೂ ಬಟ್ಟೆಹಾವು ಬಿಡುವುದಿಲ್ಲ. ಜಿಲ್ಲೆಯಲ್ಲಿ ನಡೆದ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ತಂತ್ರಗಳನ್ನು ಮಾಡುತ್ತಿದ್ದು, ಯಾವುದಕ್ಕೂ ಮಣೆ ಹಾಕುವುದಿಲ್ಲ. ಭ್ರಷ್ಟರಿಗೆ ಖಂಡಿತ ಶಿಕ್ಷೆ ಆಗಲಿದೆ. ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಹಿಂದೆ ಜಿಲ್ಲಾಧಿಕಾರಿಯಾಗಿದ್ದಾಗ ಬಿಜೆಪಿಯವರಿಗೆ ಒಳ್ಳೆಯವರಾಗಿದ್ದರು. ಪ್ರಸ್ತುತ ಅವರ ತೇಜೋವಧೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.
 ಶಾಸಕ ಬಿ.ಪಿ.ಹರೀಶ್ ಅವರು ಹಿಂದೆ ನಮ್ಮ ಶಾಸಕರ ಅವಧಿಯಲ್ಲಿ ಅಭಿವೃದ್ಧಿಗೆ ತಡೆಯೊಡ್ಡಿದ್ದರು. ಜತೆಗೆ ಕೆಲವು ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಸ್ವಯಂ ತನಿಖೆಗೆ ಹರೀಶ್ ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು.
 ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಅವರ ಮಾತಿಗೆ ಸಾರ್ವಜನಿಕರೂ ಸೇರಿ ಬೇಸರ ಹಾಗೂ ಆಕ್ಷೇಪ ವ್ಯಕ್ತಪಡಿಸಿದರು.ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಬಿಜೆಪಿಗರಿಗೆ ಗೌರವ ಇದ್ದರೆ ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ಸರ್ಕಾರದ ಉಚಿತ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಒಲವು ಇರದಿದ್ದರೆ ತಮ್ಮ ಕಾರ್ಯಕರ್ತರಿಗೆ ಉಚಿತ ಭಾಗ್ಯಗಳನ್ನು ತೆಗೆದುಕೊಳ್ಳದಂತೆ ತಿಳಿಸಲಿ ಎಂದರು.
 ಪದಾಧಿಕಾರಿಗಳಾದ ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ಅನಿತಾ ಮಾಲತೇಶ್, ಶುಭಮಂಗಳ, ರಾಜೇಶ್ವರಿ, ಬಿ.ಎಲ್.ಹರೀಶ್, ಕೊಡಪಾನ ದಾದಾಪೀರ್ ಸುದ್ದಿಗೋಷ್ಠಿಯಲ್ಲಿದ್ದರು.