ದಾವಣಗೆರೆ : ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ನಿರಾಧಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಹೇಳಿದ್ದಾರೆ. ಕಮಿಷನ್ ಬಗ್ಗೆ ಅವರ ಹೇಳಿಕೆ ಗಾಳಿಯಲ್ಲಿ ಗುಂಡು ಹಾರಿಸಿದಂತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದವರು, ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಅವರು ಮಾತು ಗಂಭೀರವಾಗಿರಬೇಕು. ಆರೋಪಕ್ಕೆ ಪುರಾವೆಗಳಿದ್ದರೆ ಒದಗಿಸಲಿ, ನಮ್ಮ ಸರ್ಕಾರ ತನಿಖೆ ನಡೆಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಗ ನಿಖಿಲ್ ಕುಮಾರ ಸ್ವಾಮಿ ಹ್ಯಾಟ್ರಿಕ್ ಸೋಲು ಕುಮಾರಸ್ವಾಮಿ ಅವರನ್ನು ಕಂಗೆಡಿಸಿದೆ. ಪುತ್ರನನ್ನು ಅವರ ಪಕ್ಷದ ರಾಜ್ಯಾಧ್ಯಕ್ಷ ಮಾಡುವ ಪ್ರಯತ್ನಕ್ಕೆ ಅವರ ಪಕ್ಷದವರೇ ಅಡ್ಡಗಾಲು ಹಾಕುತ್ತಿದ್ದಾರೆ. ಜೆಡಿಎಸ್‌ನ ಅನೇಕ ಶಾಸಕರು ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ. ಇದರಿಂದ ವಿಚಲಿತರಾಗಿ ಕುಮಾರಸ್ವಾಮಿ ಅವರು ಹಿಟ್ ಆ್ಯಂಡ್ ರನ್ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.