ದಾವಣಗೆರೆ : ಕಾಂಗ್ರೆಸ್ ಪಕ್ಷದ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ‘ಗಾಂಧಿ ಭಾರತ’ ಹೆಸರಿನಡಿ ಡಿ. 26 ಮತ್ತು 27ರಂದು ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಶತಮಾನ ಪೂರೈಸಿದ ಖುಷಿಯಲ್ಲಿ ಕಾಂಗ್ರೆಸ್ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಡಿ. 26ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. 27ರಂದು ಪಕ್ಷದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಎಐಸಿಸಿ ಅಧಿವೇಶನ 23 ವರ್ಷಗಳ ಬಳಿಕ ಕರ್ನಾಟಕದಲ್ಲಿ ನಡೆಯುತ್ತಿರುವುದು ಸಂತಸ ಮೂಡಿಸಿದೆ. ಪಕ್ಷದ ಬಲವರ್ಧನೆಗೆ ಇದರಿಂದ ಅನುಕೂಲವಾಗಲಿದೆ. ಎಐಸಿಸಿ ಪದಾಧಿಕಾರಿಗಳು, ಸಂಸದರು ಸೇರಿ ಹಲವು ಗಣ್ಯರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಪಕ್ಷವನ್ನು ಸಂಘಟಿಸುವ ರೀತಿ, ಯಾವ ದಿಕ್ಕಿನಲ್ಲಿ ದೇಶವನ್ನು ಮುನ್ನಡೆಸಬೇಕು ಎಂಬ ಕುರಿತು ಚರ್ಚೆಗಳು ನಡೆಯಲಿವೆ ಎಂದರು. ಡಿ. 27ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅಧ್ಯಕ್ಷತೆಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ದೇಶದ ವಿವಿಧೆಡೆಯಿಂದ ಪಕ್ಷದ ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸಮಾವೇಶಕ್ಕೆ ಆಗಮಿಸಲಿದ್ದಾರೆ. ದಾವಣಗೆರೆ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಮಾವೇಶಕ್ಕೆ ತೆರಳಲು ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಕೆ.ಎಂ. ಮಂಜುನಾಥ್, ಎಂ.ಕೆ. ಲಿಯಾಕತ್ ಅಲಿ, ನಿಟುವಳ್ಳಿ ಎಸ್ ಪ್ರವೀಣ್ ಕುಮಾರ್, ಬಿ.ಎಚ್. ಉದಯ್ ಕುಮಾರ್, ಡಿ. ಶಿವಕುಮಾರ್, ಗಿರಿಧರ್ ಸತೊಳ್, ಬಿ.ಎಸ್. ಸುರೇಶ್, ಆನಗೋಡು ನಾಗರಾಜ್, ಸಿ.ರಮೇಶ್ ಅರಸೀಕೆರೆ, ರವಿನಂದನ್ ಇದ್ದರು.