ದಾವಣಗೆರೆ : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗೃಹಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರು ದೇಶದ ಜನರ ಮುಂದೆ ಕ್ಷಮೆ ಯಾಚಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ ಆಗ್ರಹಿಸಿದ್ದಾರೆ. ಅಂಬೇಡ್ಕರ್ ಹೆಸರನ್ನು ಪದೇ ಪದೇ ಬಳಸುವುದು ಕೆಲವರಿಗೆ ಫ್ಯಾಷನ್ ಆಗಿದೆ ಎಂದು ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಹೇಳಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೌರವ, ಪ್ರೀತಿ ಇಲ್ಲ. ಆರ್‌ಎಸ್‌ಎಸ್ ಸಿದ್ಧಾಂತವೇ ಅವರಿಗೆ ಸಂವಿಧಾನವೆಂದು ಬಸವರಾಜ ವ್ಯಂಗ್ಯವಾಡಿದ್ದಾರೆ.